

-ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ
ಮುನ್ನೂರ ಆರುವತ್ತೈದು ದೇವಾಲಯಗಳ ನಗರ ಬಾರಕೂರಿನಲ್ಲಿ ಒಂದು ಕಾಲಕ್ಕೆ 10 ಕೆರೆ ಮತ್ತು 10 ಕೇರಿಗಳು ಇದ್ದವು. ದಿನಕಳೆದಂತೆ ಕೇರಿಗಳ ಹೆಸರು ಜನಮಾನಸದಲ್ಲಿ ಉಳಿದವು. ಇಲ್ಲಿನ ನೆಲ ಮತ್ತು ಜಲ ಸಂಪತ್ತಿನ ಬಗ್ಗೆ ಕಾಳಜಿಯಿಂದ ಹಿರಿಯರು ನಿರ್ಮಿಸಿದ ಕೆರೆಗಳಲ್ಲಿ ಹಲವು ಕಣ್ಮರೆಯಾಗಿವೆ. ಇರುವ ನಾಲ್ಕು ಕೆರೆಗಳಲ್ಲೂ ಇದೀಗ ನೀರು ಬರಿದಾಗಿದೆ.
ಈಗಿರುವ ಪ್ರತಿ ಕೆರೆ 5 ಎಕರೆ ವಿಸ್ತೀರ್ಣದ್ದಾಗಿದ್ದು, ಕೋಟೆಕೇರಿ, ಚೌಳಿಕೇರಿ, ಮೂಡುಕೇರಿಯಲ್ಲಿ ಇರುವ ವಿಶಾಲ ಕೆರೆಗಳಲ್ಲಿ ಹೂಳು ತುಂಬಿ ಈಗ ಅಲ್ಪಸ್ವಲ್ಪ ಮಾತ್ರ ಕಂಡು ಬರುತ್ತಿದೆ. ರಾಜರುಗಳ ಕಾಲದಲ್ಲಿ ಮಾಡಲಾದ ಕೆರೆಗಳಿಗೆ ಹತ್ತಿಳಿಯಲು ನಿರ್ಮಿಸಿದ್ದ ಕಲ್ಲಿನ ಮೆಟ್ಟಿಲುಗಳು ಜಾರಿಬಿದ್ದ ಕುರುಹುಗಳು ಇನ್ನೂ ಇವೆ. ಕೃಷಿ ನೀರಾವರಿಗೆ ನೀರು ಹರಿಯಲು ರೂಪಿಸಲಾಗಿದ್ದ ಸುರಂಗ ಮಾರ್ಗ ಹೂಳು ತುಂಬಿ ಮುಚ್ಚಿಹೋಗಿದೆ.
4 ವರ್ಷದ ಹಿಂದೆ ಬಾರಕೂರು ಮಹಾ ಸಂಸ್ಥಾನದ ವಿಶ್ವ ಸಂತೋಷ ಗೂರೂಜಿ ಇಲ್ಲಿನ ಮೂಡುಕೇರಿಯ ಸೋಮೇಶ್ವರ ದೇವಸ್ಥಾನದ ಕೆರೆಯಲ್ಲಿ ಗಂಗಾರತಿ ಎನ್ನುವ ಕಾರ್ಯಕ್ರಮ ಮಾಡಿ ಸರೋವರಗಳ ಕುರಿತು ಸಾರ್ವಜನಿಕರ ಗಮನಸೆಳೆದಿದ್ದರು. ಸರ್ಕಾರಕ್ಕೆ ಬಾರಕೂರಿನ ಕೆರೆ ಅಭಿವೃದಿಗಾಗಿ ಮನವಿ ಮಾಡಿದ್ದರು. ಆ ಬಳಿಕ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಮೂಡುಕೇರಿ ಕೆರೆ ಪರಿಶೀಲನೆ ಮಾಡಿ ಸಮಗ್ರ ನವೀಕರಣಕ್ಕೆ ಶಿಫಾರಸು ಮಾಡಿ ಸರ್ಕಾರಕ್ಕೆ ವರದಿ ನೀಡಿದ್ದರು.
ಸರ್ಕಾರ ಜಲಸಂಪತ್ತು ಹೆಚ್ಚಿಸಲು ಅನೇಕ ಯೋಜನೆ ರೂಪಿಸುತ್ತಿದೆ. ಆದರೆ ನಮ್ಮ ಪೂರ್ವಿಕರು ಜಲ ಸಂಪತ್ತಿನ ಸಂಗ್ರಹಕ್ಕೆ ಮಾಡಿರುವ ಕೆರೆ, ಮದಗಗಳ ಹೂಳನ್ನು ತೆಗೆದು ಅಭಿವೃದ್ಧಿಪಡಿಸುವ ಕೆಲಸ ಮಾಡುತ್ತಿಲ್ಲ. ಈ ಬಾರಿ ಮಳೆ ಕೊರತೆಯಿಂದ ವಿಪರೀತ ನೀರಿನ ಸಮಸ್ಯೆ ಉಂಟಾಗಿದೆ. ಸ್ಥಳೀಯ ನೀರಿನ ಮೂಲಗಳ ಮಹತ್ವ ಬಗ್ಗೆ ಸಾರ್ವಜನಿಕರು, ಸರ್ಕಾರಕ್ಕೆ ಅರಿವಾಗಿದೆ. ಅಂತರ್ಜಲ ಹೆಚ್ಚಳ, ನೀರಿನ ಮೂಲಗಳಿಗೆ ಕಾಯಕಲ್ಪ ಮಾಡಲು ಇದು ಸಕಾಲ. ಸೂಕ್ತ ಯೋಜನೆಯೊಂದಿಗೆ ಇಲ್ಲಿನ ಕೆರೆಗಳ ಅಭಿವೃದ್ಧಿಗೆ ಸರ್ಕಾರ ಮನ ಮಾಡಬೇಕಿದೆ.
ಮಣೆಗಾರ ಕೇರಿ ಬಳಿ ಇರುವ ಬೆಳ್ತಿಕೆರೆಯನ್ನು ಪುನರುಜ್ಜೀವನಗೊಳಿಸಲು 2 ವರ್ಷದ ಹಿಂದೆ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಹೂಳು ಮತ್ತು ಕಳೆ ಗಿಡವನ್ನು ತೆಗೆಸಲಾಗಿತ್ತು. ಕೆರೆಗೆ ಕಾಯಕಲ್ಪ ನೀಡಿ ನೀರು ಉಳಿಸಲು ಕ್ರಮ ಕೈಗೊಳ್ಳಲಾಗಿತ್ತು. ಈ ಕ್ರಮಗಳ ಫಲಶ್ರುತಿ ಎಂಬಂತೆ ಇಂದು ಈ ಕೆರೆಯಲ್ಲಿ ನೀರು ಕಂಡು ಬರುತ್ತಿದೆ. ಇನ್ನುಳಿದ ಹೊಸಕೆರೆ, ರಂಗನಕೆರೆ, ಪಡಸಾಲಕೆರೆಗಳಲ್ಲಿ ನೀರು ಮಾಯವಾಗಿದೆ.