

ಬಾಗಲಕೋಟೆ: ಸಾಮಾಜಿಕ ಜಾಲತಾಣ ಅಸಲಿಗಿಂತ ನಕಲಿಗಳ ಅಡ್ಡೆಯಾಗಿದೆ. ಯಾರದ್ದೋ ಹೆಸರಿನಲ್ಲಿ ಇನ್ಯಾರೋ ಫೋಟೋ ಮತ್ತು ವಿಡಿಯೋಗಳನ್ನು ಹರಿಬಿಡುತ್ತಾರೆ. ಅದರಲ್ಲೂ ಸೆಲೆಬ್ರಿಟಿಗಳ ವಿಚಾರದಲ್ಲಿ ಇದು ಹೆಚ್ಚು. ಅಭಿಮಾನಿಗಳ ಸೋಗಿನಲ್ಲಿ ನಕಲಿ ಖಾತೆಯನ್ನು ತೆರೆದು ಬೇರೆ ನಟರನ್ನು ತೇಜೋವಧೆ ಮಾಡುತ್ತಾರೆ. ಇದರಿಂದ ಫ್ಯಾನ್ಸ್ ವಾರ್ ಕೂಡ ನಡೆಯುತ್ತಿದೆ. ಹೀಗೆ ಸಾಕಷ್ಟು ಎಡವಟ್ಟುಗಳು ಜಾಲತಾಣದಲ್ಲಿ ನಡೆಯುತ್ತಲೇ ಇರುತ್ತದೆ.
ಸೆಲೆಬ್ರಿಟಿ ಮಾತ್ರವಲ್ಲ ಇದೀಗ ಪವಾಡಪುರಷನ ಹೆಸರಲ್ಲೂ ನಕಲಿ ಖಾತೆಯೊಂದು ಹುಟ್ಟಿಕೊಂಡಿದೆ. ಬಾಗಲಕೋಟೆಯ ಪವಾಡಪುರುಷ ಲಿಂಗೈಕ್ಯ ಲಡ್ಡು ಮುತ್ಯಾ ( Laddu Mutya ) ಹೆಸರಲ್ಲಿ ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆ ತೆರೆಯಲಾಗಿದ್ದು, ಜನರ ಆಕ್ರೋಶಕ್ಕೆ ಗುರಿಯಾಗಿದೆ. ತಿರುಗುವ ಫ್ಯಾನ್ ನಿಲ್ಲಿಸಿ ಅದರ ಧೂಳನ್ನು ವಿಭೂತಿ ರೀತಿ ಭಕ್ತರ ಹಣೆಗೆ ಹಚ್ಚುವ ನಕಲಿ ಲಡ್ಡು ಮುತ್ಯಾರನ್ನು ನೀವು ಸಾಮಾಜಿಕ ಜಾಲತಾಣದಲ್ಲಿ ನೋಡಿರಬಹುದು.
ರೀಲ್ಸ್ ಅಥವಾ ಶಾರ್ಟ್ಸ್ಗಳನ್ನು ಹೆಚ್ಚಾಗಿ ನೋಡುವವರಿಗೆ ಈ ನಕಲಿ ಲಡ್ಡು ಮುತ್ಯಾನ ಪರಿಚಯ ಇರುತ್ತದೆ. ಈ ನಕಲಿ ಲಡ್ಡುಮುತ್ಯಾ ಓರ್ವ ವಿಕಲಚೇತನ. "ಲಡ್ಡು ಮುತ್ಯಾನ ಅವತಾರ ಈಗಿನ ಸಂಚಾರಿ ದೇವರ" ಎಂಬ ಹಾಡಿನೊಂದಿಗೆ ರೀಲ್ಸ್ ವೈರಲ್ ಆಗಿದೆ. ಅದರಲ್ಲಿ ಇಬ್ಬರು ವ್ಯಕ್ತಿಗಳು ನಕಲಿ ಲಡ್ಡು ಮುತ್ಯಾನ ಎತ್ತಿ ಹಿಡಿಯುತ್ತಾರೆ. ಬಳಿಕ ಆತ ವೇಗವಾಗಿ ತಿರುಗುವ ಫ್ಯಾನ್ ನಿಲ್ಲಿಸಿ ಅದರ ಧೂಳನ್ನೇ ಭಸ್ಮದ ರೀತಿ ತನ್ನ ಸುತ್ತಲು ಇರುವವರ ಹಣೆಗೆ ಲೇಪಿಸುತ್ತಾನೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟ್ರೆಂಡಿಂಗ್ನಲ್ಲಿದೆ. ಅಲ್ಲದೆ, ನಕಲಿ ಲಡ್ಡು ಮುತ್ಯಾನ ಅನುಕರಣೆ ಮಾಡಿ ಸಾಕಷ್ಟು ಮಂದಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಯುವಕರು, ಹಿರಿಯರು ಹಾಗೂ ಮಕ್ಕಳು ಕೂಡ ನಕಲಿ ಲಡ್ಡು ಮುತ್ಯಾನ ಅನುಕರಣೆ ಮಾಡಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಪ್ರದೇಶ ಹಾಗೂ ತಮಿಳುನಾಡು ಸೇರಿದಂತೆ ದೇಶದಾದ್ಯಂತ ನಕಲಿ ಲಡ್ಡು ಮುತ್ಯಾನ ಅನುಕರಣೆ ಮಾಡಿದ ರೀಲ್ಗಳು ವೈರಲ್ ಆಗಿವೆ.
ಆದರೆ, ಅಸಲಿ ಸಂಗತಿ ಏನೆಂದರೆ, ನಕಲಿ ಲಡ್ಡು ಮುತ್ಯಾಗೂ ಮೂಲ ಲಡ್ಡುಮುತ್ಯಾಗೂ ಯಾವುದೇ ಸಂಬಂಧವಿಲ್ಲ. ಲಡ್ಡುಮುತ್ಯಾ ಮಠ ಇರೋದು ಬಾಗಲಕೋಟೆಯ ಸೀಮಿಕೇರಿಯಲ್ಲಿ ಮಾತ್ರ. ಈ ಮಠ ಬೇರೆ ಎಲ್ಲೂ ಇಲ್ಲ. ಅಲ್ಲದೆ, ಈ ಮಠದ ಯಾವುದೇ ಶಾಖಾ ಮಠವೂ ಇಲ್ಲ. ಇತರೆ ಮಠದಿಂದ ಯಾವ ಸ್ವಾಮೀಜಿಗಳನ್ನು ನೇಮಕ ಮಾಡಿಲ್ಲ. ಸೀಮಿಕೇರಿಯಲ್ಲಿ ಲಡ್ಡುಮುತ್ಯಾ ಗದ್ದುಗೆ ಇದೆ. ಅಲ್ಲಿ ಅವರ ಮೂರ್ತಿ ಕೂಡ ಇದೆ. ಅಲ್ಲಿಗೆ ಬಂದು ಭಕ್ತರು ದರ್ಶನ ಪಡೆಯಬಹುದು. ಪ್ರತಿ ಹುಣ್ಣಿಮೆ ಹಾಗೂ ಅಮವಾಸ್ಯೆ ದಿನ ಪ್ರಸಾದವನ್ನು ವಿತರಣೆ ಮಾಡಲಾಗುತ್ತದೆ.
ರೀಲ್ಸ್ನಲ್ಲಿ ಬರುವ ನಕಲಿ ಲಡ್ಡುಮುತ್ಯಾನಿಂದ ಯಾರೂ ಮೋಸ ಹೋಗಬಾರದು ಮತ್ತು ಇದು ಲಿಂಗೈಕ್ಯ ಲಡ್ಡು ಮುತ್ಯಾರಿಗೆ ಮಾಡುತ್ತಿರುವ ಅವಮಾನ ಅಂತ ಭಕ್ತರು ಹಾಗೂ ಲಡ್ಡು ಮುತ್ಯಾ ಮಠದ ಆಡಳಿತ ಮಂಡಳಿ ನಕಲಿ ಲಡ್ಡು ಮುತ್ಯಾ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.