ಕುಂದಾಪುರ ತಾಲೂಕು ಪಂಚಾಯಿತಿ ಸಭೆ

meeting
ಶಾಸಕ ಕಿರಣ್ ಕುಮಾರ್ ಕೊಡ್ಗಿ ನೇತೃತ್ವದಲ್ಲಿ ಕುಂದಾಪುರ ಹಾಗೂ ಬ್ರಹ್ಮಾವರ ತಾಲೂಕು ಸಭೆ ನಡೆಯಿತು
Published on

ವಿಜಯವಾಣಿ ಸುದ್ದಿಜಾಲ ಕುಂದಾಪುರ

ಕುಂದಾಪುರ ಹಾಗೂ ಬ್ರಹ್ಮಾವರ ತಾಲೂಕಿನ ಅನೇಕ ಕಡೆ ಹೊಳೆ ಹೂಳಿನ ಸಮಸ್ಯೆಯಿಂದ ಕೃತಕ ನೆರೆ ಸೃಷ್ಟಿಯಾಗಿದ್ದು, ಕೃಷಿ ಕೊಳೆಯುತ್ತಿದೆ. ಶಾಶ್ವತ ಪರಿಹಾರಕ್ಕಾಗಿ ಹೊಳೆಯ ಹೂಳೆತ್ತಬೇಕು ಎಂದು ಜನರು ಬೇಡಿಕೆ ಇರಿಸಿದ್ದು, ಈ ಹಿನ್ನೆಲೆಯಲ್ಲಿ ಶಾಸಕ ಕಿರಣ್ ಕುಮಾರ್ ಕೊಡ್ಗಿ ನೇತೃತ್ವದಲ್ಲಿ ಮಂಗಳವಾರ ಕುಂದಾಪುರ ತಾಲೂಕು ಪಂಚಾಯಿತಿಯಲ್ಲಿ ಸಭೆ ನಡೆಯಿತು.

ಶಾಸಕ ಕೊಡ್ಗಿ ಮಾತನಾಡಿ, ಮಾರ್ಚ್‌ನಲ್ಲಿ ಹೂಳೆತ್ತುವ ಪ್ರಕ್ರಿಯೆ ಆರಂಭಿಸುವ ನಿಟ್ಟಿನಲ್ಲಿ ಸಿದ್ದತೆಗಳು ಆರಂಭವಾಗಿದ್ದು, ಪಂಚಾಯಿತಿಗಳು ಜವಾಬ್ದಾರಿ ವಹಿಸಿಕೊಳ್ಳಬೇಕು. ಹೂಳು ತೆಗೆಯುವ ಸಂದರ್ಭ ರೈತರ ಸಭೆ ಕರೆದು ಸಲಹೆ ಪಡೆಯಬೇಕು. ಒಂದು ತಿಂಗಳೊಳಗೆ ಕಾಮಗಾರಿ ಪೂರ್ಣವಾಗಬೇಕು. ಹೂಳಿನ ಜತೆ ಮರಳು ದೊರೆತರೆ ಗಣಿ ಇಲಾಖೆ ಅನುಮತಿಯೊಂದಿಗೆ ಪಂಚಾಯಿತಿ ಅದನ್ನು ಮಾರಾಟ ಮಾಡಿ ಆದಾಯ ಗಳಿಸಬಹುದು. 13 ಪಂಚಾಯಿತಿಗಳಿಗೆ ಈಗಾಗಲೇ ಮರಳು ತೆಗೆಯಲು ಅನುಮತಿ ನೀಡಲಾಗಿದೆ ಎಂದರು.

ಯಡಾಡಿ ಮತ್ಯಾಡಿಯಿಂದ ಬಾರ್ಕೂರುವರೆಗೆ ಹಿರೆಹೊಳೆಗೆ, ಹೊಂಬಾಡಿ ಮಂಬಾಡಿಯಿಂದ ಗಿಳಿಯಾರ್‌ವರೆಗೆ ಕಿರಿಹೊಳೆಗೆ, ಕಾರ್ಕಡ ನಾಗರಮಠದಿಂದ ಉಳ್ತೂರುವರೆಗೆ ಉಪ್ಲಾಡಿ ಹೊಳೆಗೆ ಒಟ್ಟು 3 50 ಕಿ.ಮೀ. ಹೊಳೆದಂಡೆ ರಚನೆ, ಹೂಳೆತ್ತಲು 21 ಕೋ.ರೂ. ಅಂದಾಜುಪಟ್ಟಿ ತಯಾರಿಸಲಾಗಿದೆ ಎಂದು ಸಣ್ಣ ನೀರಾವರಿ ಇಲಾಖೆಯವರು ತಿಳಿಸಿದರು. ಕಾಳಾವರ ರಾಮಚಂದ್ರ ನಾವಡ, ವಾರಾಹಿ ನೀರಿನ ಹರಿವು ಸ್ಥಗಿತಗೊಳಿಸಿದರೆ ಕುಡಿಯಲು ನೀರಿನ ಕೊರತೆ ಎದುರಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಕುಂದಾಪುರ ತಹಸೀಲ್ದಾರ್ ಶೋಭಾಲಕ್ಷ್ಮೀ, ಬ್ರಹ್ಮಾವರ ತಹಶೀಲ್ದಾರ್ ಶ್ರೀಕಾಂತ್ ಹೆಗಡೆ, ಬ್ರಹ್ಮಾವರ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಇಬ್ರಾಹಿಂಪುರ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಶಶಿಧರ್ ಕೆ.ಜಿ. ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ, ಕಾಳಾವರ, ಕೆದೂರು, ಬೇಳೂರು, ತೆಕ್ಕಟ್ಟೆ, ಕೋಟ, ಬಾರ್ಕೂರು ಮತ್ತು ವಡ್ಡರ್ಸೆ ಗ್ರಾಮ ಪಂಚಾಯಿತಿ ಪ್ರತಿನಿಧಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ತೋಟಗಾರಿಕೆ, ಕೃಷಿ ಇಲಾಖೆ ಸಹಾಯಕ ನಿರ್ದೇಶಕರು, ವಲಯ ಅರಣ್ಯಾಧಿಕಾರಿ ಉಪಸ್ಥಿತರಿದ್ದರು.

ಎಲ್ಲೆಲ್ಲಿ ಕೃತಕ ನೆರೆಯ ಸಮಸ್ಯೆ

ಕಾಳಾವರ, ಕೆದೂರು, ಬೇಳೂರು, ತೆಕ್ಕಟ್ಟೆ, ಕೋಟ, ಬಾರ್ಕೂರು ಮತ್ತು ವಡ್ಡರ್ಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹರಿಯುವ ನದಿಗಳಲ್ಲಿ ತುಂಬಿರುವ ಹೂಳುಗಳಿಂದ ಕೃತಕ ನೆರೆ ಉಂಟಾಗುತ್ತಿದೆ. ತೆಕ್ಕಟ್ಟೆ ಮಲ್ಯಾಡಿಯಿಂದ ಚಿತ್ರಪಾಡಿಯ ತನಕ ಹರಿಯುವ ಸೊಲಡ್ಪು ನದಿಯಲ್ಲಿ ತುಂಬಿರುವ ಹೂಳಿನಿಂದ ಪ್ರತಿ ಮಳೆಗಾಲದಲ್ಲೂ ಕೃತಕ ನೆರೆಯುಂಟಾಗಿ ಕೃಷಿಗೆ ಹಾನಿಯುಂಟಾಗುತ್ತಿತ್ತು. ಇತ್ತೀಚೆಗೆ ಜೋರಾಗಿ ಸುರಿದ ಮಳೆಯಿಂದಾಗಿ ಗಿಳಿಯಾರು, ಬೇಳೂರು ಪರಿಸರದಲ್ಲಿ ಕೃಷಿಗೆ ಹಾನಿಯಾಗಿತ್ತು. ಈ ಹಿನ್ನೆಲೆಯಲ್ಲಿ ಸಭೆ ಕರೆಯಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net