

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ವಿದ್ಯೆ ಸಮರಸವಾಗಿ ಸಾಮರಸ್ಯದ ಬದುಕಿಗೆ ನಮ್ಮನ್ನು ಅಣಿಗೊಳಿಸಬೇಕು. ಕೇವಲ ದೇವಸ್ಥಾನಕ್ಕೆ ಹೋದರೆ ಪುಣ್ಯ ಸಂಪಾದನೆಯಾಗುವುದಿಲ್ಲ, ಸಂಸ್ಕಾರಯುತ ಶಿಕ್ಷಣವೂ ದೊರಕಬೇಕು. ಮಕ್ಕಳು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತರಬೇಕು ಎಂದು ಶಾಸಕ ಗುರ್ಮೆ ಸುರೇಶ ಶೆಟ್ಟಿ ಹಾರೈಸಿದರು.
ನಂದಿಕೂರು ಶಾಲೆಯಲ್ಲಿ ಮಂಗಳವಾರ ಉಡುಪಿ ತಾಲೂಕು ಮಟ್ಟದ ಬಾಲಕ ಬಾಲಕಿಯರ ವಾಲಿಬಾಲ್ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು.
ಕ್ರೀಡಾಕೂಟಕ್ಕೆ ಚಾಲನೆ ನೀಡಿದ ದಾನಿ ಉಮಾ ಕಿಟ್ಟಣ್ಣ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ನಂದಿಕೂರು ಎಜುಕೇಶನ್ ಟ್ರಸ್ಟ್ ಕಾರ್ಯಾಧ್ಯಕ್ಷ ಲಕ್ಷ್ಮಣ್ ಎಲ್.ಶೆಟ್ಟಿವಾಲ್ ಅಧ್ಯಕ್ಷತೆ ವಹಿಸಿದ್ದರು. ನಂದಿಕೂರು ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಅನಿಲ್ ಶೆಟ್ಟಿ ಏಳಿಂಜೆ, ಯುವಜನ ಮತ್ತು ಕ್ರೀಡಾ ಇಲಾಖೆ ತಾಲೂಕು ಅಧಿಕಾರಿ ರಿತೇಶ್‌ಕುಮಾರ್ ಶೆಟ್ಟಿ ಸೂಡ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜಗನ್ನಾಥ ಶೆಟ್ಟಿ, ಉಪಾಧ್ಯಕ್ಷೆ ವೀಣಾ ಶೆಟ್ಟಿ, ರಾಮಕೃಷ್ಣ ಭಟ್, ವಸಂತ ಶೆಟ್ಟಿ, ಆಡಳಿತಾಧಿಕಾರಿ ಸಾಯಿನಾಥ್ ಎಂ.ಶೆಟ್ಟಿ, ಟ್ರಸ್ಟ್ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಅಡ್ವೆ ಮಾಗಂದಡಿ, ಜತೆ ಕಾರ್ಯದರ್ಶಿ ನಾಗರಾಜ ರಾವ್, ನಂದಿಕೂರು ಹಾಲು ಉತ್ಪಾದಕರ ಸಂಘ ಅಧ್ಯಕ್ಷ ಉದಯ ರೈ, ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ಮಹೇಶ್ ಶೆಟ್ಟಿ ಉಪಸ್ಥಿತರಿದ್ದರು.
ಮುಖ್ಯಶಿಕ್ಷಕಿ ರಮಣಿ ಸ್ವಾಗತಿಸಿ, ದೈಹಿಕ ಶಿಕ್ಷಣ ತಾಲೂಕು ಪರಿವೀಕ್ಷಣಾಧಿಕಾರಿ ಚಂದ್ರಶೇಖರ ಸುವರ್ಣ ಪ್ರಾಸ್ತವಿಕವಾಗಿ ಮಾತನಾಡಿದರು. ಶ್ವೇತಾ ದಾನಿಗಳ ಪಟ್ಟಿ ಓದಿದರು. ಶಿಕ್ಷಕಿ ಜಯಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ಪ್ರೇಮಾ ವಂದಿಸಿದರು.
ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ 8 ತಂಡಗಳು ಭಾಗವಹಿಸಿದ್ದವು. ಬಾಲಕರ ವಿಭಾಗದಲ್ಲಿ ಕಾಪು ದಂಡತೀರ್ಥ ಆಂಗ್ಲ ಮಾಧ್ಯಮ ಶಾಲೆ ಪ್ರಥಮ ಹಾಗೂ ಮಲ್ಪೆ ನಾರಾಯಣ ಗುರು ಶಾಲೆ ತಂಡ ದ್ವಿತೀಯ ಸ್ಥಾನ ಪಡೆಯಿತು. ಬಾಲಕಿಯರ ವಿಭಾಗದಲ್ಲಿ ಶಂಕರಪುರ ಸೇಂಟ್ ಜೋನ್ಸ್ ಶಾಲೆ ಪ್ರಥಮ ಹಾಗೂ ಕಾಜಾರಗುತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದ್ವಿತೀಯ ಬಹುಮಾನ ಪಡೆಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಎಲ್ಲಮ್ಮ ಬಹುಮಾನ ವಿತರಿಸಿದರು.