ಬೀದಿ ಬದಿ ಕೋಮು ಕಾಳಗದ ಭೀತಿ : ಶಾಸಕ ಅಶೋಕ್ ರೈ ಕಳವಳ

sabhe
Published on

ಪುತ್ತೂರು: ರಾಜಕೀಯ ಪಕ್ಷಗಳು ಯುವಕರನ್ನು ದಾರಿ ತಪ್ಪಿಸುತ್ತಿವೆ. ಇದೇ ರೀತಿ ಮುಂದುವರಿದರೆ 25 ವರ್ಷಗಳ ನಂತರ ದೇಶದ ಬೀದಿ-ಬೀದಿಗಳಲ್ಲಿ ಕಾದಾಟ ನಡೆಯುವ ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಶಾಸಕ ಅಶೋಕ್‌ಕುಮಾರ್ ರೈ ಹೇಳಿದರು.

ಬಡಗನ್ನೂರು ಗ್ರಾಮದ ಕುಕ್ಕಾಜೆ ಬದ್ರಿಯಾ ಜುಮಾ ಮಸೀದಿ ಹಾಗೂ ಸಿರಾಜುಲ್ ಹುದಾ ಮದ್ರಸ ವೇದಿಕೆಯಲ್ಲಿ ಭಾನುವಾರ ಸಂಜೆ ‘ಹುಬ್ಬುರ‌್ರಸೂಲ್ ಕಾನ್ಫರೆನ್ಸ್ ಹಾಗೂ ಮಿಲಾದ್ ಫೆಸ್ಟ್’ ಕಾರ್ಯಕ್ರಮದ ಸೌಹಾರ್ದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಕುಕ್ಕಾಜೆ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಸುಲೈಮಾನ್ ಮಿಸ್ಬಾಹಿ ಅಧ್ಯಕ್ಷತೆ ವಹಿಸಿದ್ದರು. ಈಶ್ವರಮಂಗಲದ ತೊಯಿಬಾ ಸಂಸ್ಥೆಯ ಧಾರ್ಮಿಕ ಗುರು ಅಬ್ದುಲ್ ಅಝೀಝ್ ಮಿಸ್ಬಾಹಿ, ಪುತ್ತೂರು ಅಕ್ರಮ-ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು, ಭೂ ನ್ಯಾಯಮಂಡಳಿ ಸಮಿತಿ ಸದಸ್ಯ ಕೃಷ್ಣಪ್ರಸಾದ್ ಆಳ್ವ, ನೆಟ್ಟಣಿಗೆ ಮುಡ್ನೂರು ಗ್ರಾಪಂ ಮಾಜಿ ಅಧ್ಯಕ್ಷ ರಮೇಶ್ ರೈ ಸಾಂತ್ಯ, ಬಡಗನ್ನೂರು ಗ್ರಾ.ಪಂ. ಮಾಜಿ ಅಧ್ಯಕ್ಷ ರವಿರಾಜ್ ರೈ ಸಜಂಕಾಡಿ, ಪುರಂದರ ರೈ ಕುದ್ಕಾಡಿ ಮತ್ತಿತರರು ಉಪಸ್ಥಿತರಿದ್ದರು. ರಿಯಾಝ್ ಕುಕ್ಕಾಜೆ ಸ್ವಾಗತಿಸಿ, ವಂದಿಸಿದರು.

ಮಕ್ಕಳಿಗೆ ಒಳ್ಳೆಯ ಸಂಸ್ಕಾರ, ಶಿಕ್ಷಣ ನೀಡಿ ಉತ್ತಮ ಉದ್ಯೋಗ ಸಿಗುವಂತೆ ಮಾಡಿ. ಮಕ್ಕಳು ಯಾರ ತಂಟೆಗೂ ಹೋಗದಂತೆ, ಗಲಾಟೆಗಳಲ್ಲಿ ಭಾಗಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರತಿ ಧರ್ಮದ ಪಾಲಕರದ್ದು. ನಾವು ಸಾಕಿ ಬೆಳೆಸಿದ ಮಕ್ಕಳು ನಮ್ಮನ್ನು ಸಲಹುವ ಕಾಲದಲ್ಲಿ ಜೈಲಲ್ಲಿ ಇರದಂತೆ ನೋಡಿಕೊಳ್ಳೋಣ. - ಅಶೋಕ್‌ಕುಮಾರ್ ರೈ, ಪುತ್ತೂರು ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net