

ಬಾಗಲಕೋಟೆ: ಸಂವಿಧಾನ ಶಿಲ್ಪಿ ಡಾ.ಬಿ. ಆರ್. ಅಂಬೇಡ್ಕರ್ ಅವರ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಷಾ ನೀಡಿದ್ದಾರೆ ಎಂಬ ಹೇಳಿಕೆ ವಿವಾದದ ಸ್ವರೂಪ ಪಡೆದಿದ್ದು, ರಾಷ್ಟ್ರವ್ಯಾಪಿ ವಿಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ. ಇನ್ನೂ ಅಮಿತ್ ಷಾ ಅವರ ಹೇಳಿಕೆಗೆ ಸಂಬಂಧಿಸಿದಂತೆ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ (KS Eshwarappa) ಪ್ರತಿಕ್ರಿಯಿಸಿದ್ದು, ಅಂಬೇಡ್ಕರ್ ಅವರಿಗೆ ಪೂರ್ಣಪ್ರಮಾಣದಲ್ಲಿ ಗೌರವ ಕೊಡುತ್ತಿರುವುದು ಬಿಜೆಪಿ ಪಕ್ಷ ಎಂದು ಹೇಳಿದ್ದಾರೆ.
ಬಾಗಲಕೋಟೆಯಲ್ಲಿ ಈ ಕುರಿತು ಮಾತನಾಡಿದ ಈಶ್ವರಪ್ಪ (KS Eshwarappa), ಅಂಬೇಡ್ಕರ್ ಅವರು ಜೀವಂತವಾಗಿದ್ದಾಗ ಕಾಂಗ್ರೆಸ್ ಪೂರ್ಣ ಪ್ರಮಾಣದಲ್ಲಿ ಅಪಮಾನ ಮಾಡಿತ್ತು. ಅಂಬೇಡ್ಕರ್ ಚುನಾವಣೆಗೆ ನಿಂತಾಗ ಕಾಂಗ್ರೆಸ್ನವರು ಸೋಲಿಸಿದ್ರು. ಅವರು ಮೃತಪಟ್ಟಾಗ ಅಂತ್ಯಕ್ರಿಯೆಗೆ ದೆಹಲಿಯಲ್ಲಿ ಜಾಗವನ್ನು ಕೊಡಲಿಲ್ಲ. ಕೇಂದ್ರ ಮಂತ್ರಿಮಂಡಲದಲ್ಲಿದ್ದಾಗ ಅವರು ರಾಜೀನಾಮೆ ನೀಡಿದಾಗ ನೆಹರೂ ಅವರು ಕೊಟ್ರೆ ಕೊಡಲಿ ಅಂತ ಹೇಳಿ ಸುಮ್ಮನಾಗಿದ್ರು. ಕಾಂಗ್ರೆಸ್ನವರು ಅಂಬೇಡ್ಕರ್ ಅವರಿಗೆ ಮಾಡಿರುವ ಅವಮಾನ ಅಷ್ಟಿಷ್ಟಲ್ಲ.
ಬಿಜೆಪಿ ಅವರು ಅಂಬೇಡ್ಕರ್ ಅವರಿಗೆ ಪೂರ್ಣ ಪ್ರಮಾಣದ ಗೌರವವನ್ನು ಕೊಡುತ್ತಲೇ ಬಂದಿದ್ದಾರೆ. ಅಮಿತ್ ಷಾ ಅವರ ಮಾತಿನ ಅರ್ಥ ಏನಂದ್ರೆ ಬಾಯಿಂದ ಮಾತ್ರ ಅಂಬೇಡ್ಕರ್ ಅಂಬೇಡ್ಕರ್ ಅಂತಿದ್ದೀರಿ ಹೃದಯದಿಂದ ಅಂಬೇಡ್ಕರ್ ಅಂತಿಲ್ಲ ಅನ್ನೋ ಅರ್ಥದಲ್ಲಿ ಹೇಳಿದ್ದಾರೆ. ಈ ರೀತಿ ಅಂಬೇಡ್ಕರ್ ಅಂಬೇಡ್ಕರ್ ಅಂತ ಹೇಳುವ ಬದಲಿ ದೇವರು ನಾಮ ಮಾಡಿದರೆ ನಿಮಗೆ ಸ್ವರ್ಗದಲ್ಲಿ ಜಾಗ ಸಿಕ್ಕಿತ್ತು ಎಂಬರ್ಥದಲ್ಲಿ ಹೇಳಿದ್ದಾರೆ.
ದೇಶದ ಸ್ವಾತಂತ್ರ್ಯ ಸಿಕ್ಕಾಗಿನಿಂದ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್. ದಲಿತರನ್ನ ಅಭಿವೃದ್ಧಿ ಮಾಡೇ ಇಲ್ಲ. ಈಗ ಅಮಿತ್ ಷಾ ಅವರ ಮಾತನ್ನು ತಿರುಚಿ ದುರ್ಲಾಭ ಪಡೆಯುವಂಥ ಸಾಹಸಕ್ಕೆ ಕಾಂಗ್ರೆಸ್ನವರು ಕೈ ಹಾಕಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯನವರು ಕೂಡ ಪತ್ರವನ್ನು ಬರೆದಿದ್ದಾರೆ. ಯಾವುದೇ ಕಾರಣಕ್ಕೂ ಈ ಸಮಾಜ ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಮಾಡಿರುವಂತಹ ಮೋಸವನ್ನು ಮರೆಯಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ (KS Eshwarappa) ವಾಗ್ದಾಳಿ ನಡೆಸಿದ್ದಾರೆ.