ನನ್ನ ಇಲಾಖೆ ಬಜೆಟ್ ಇರುವುದು 16 ಸಾವಿರ ಕೋಟಿ ಮಾತ್ರ ಇದರಲ್ಲಿ...: DCM DK Shivakumar

DK Shivakumar
Published on

ಬೆಳಗಾವಿ: ಶೀಘ್ರದಲ್ಲೇ ಮಲ್ಲಾಬಾದ್ ಏತ ನೀರಾವರಿ ಯೋಜನೆ ಟೆಂಡರ್ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಜಲಸಂಪನ್ಮೂಲ ಸಚಿವರಾದ ಡಿ.ಕೆ. ಶಿವಕುಮಾರ್​ (DCM DK Shivakumar) ಭರವಸೆ ನೀಡಿದ್ದಾರೆ.

ವಿಧಾನ ಪರಿಷತ್ತಿನ ಶೂನ್ಯವೇಳೆಯಲ್ಲಿ ಬಿಜೆಪಿ ಸದಸ್ಯ ಬಿ.ಜಿ. ಪಾಟೀಲ್​ ಅವರ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್ (DK Shivakumar), ಬೊಮ್ಮಾಯಿ ಅವರ ಸರ್ಕಾರದ ಬಜೆಟ್​​ನಲ್ಲಿ ನೀರಾವರಿ ಇಲಾಖೆಗೆ 22 ಸಾವಿರ ಕೋಟಿ ಅನುದಾನ ನೀಡಿದ್ದರು. ಆದರೆ ನಿಗಮಗಳಲ್ಲಿ 28 ಸಾವಿರ ಕೋಟಿ ಮೊತ್ತದ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಕೆಲಸ ಮಾಡಿಸಿ ಬಿಲ್ ಪಾವತಿ ಮಾಡದಿದ್ದರೆ ಅನಗತ್ಯ ಒತ್ತಡ ಬೀಳಲಿದೆ. ಕೇಂದ್ರ ಸರ್ಕಾರದಿಂದ ನಮಗೆ ಬರಬೇಕಾಗಿರುವ 5400 ಕೋಟಿ ಹಣ ಬಂದಿಲ್ಲ. ಹೀಗಾಗಿ ನಮ್ಮ ಬಜೆಟ್​​ನಲ್ಲಿ ಇದನ್ನು 16 ಸಾವಿರ ಕೋಟಿಗೆ ಇಳಿಸಲಾಗಿದೆ. ಕೋಲಾರದ ಎತ್ತಿನ ಹೊಳೆ ಯೋಜನೆ ಪರಿಸ್ಥಿತಿಯೂ ಹೀಗೆ ಇದೆ. ತುಮಕೂರಿಗೆ ನೀರು ಬರುವವರೆಗೂ ಕಾಮಗಾರಿ ಕೈಗೆತ್ತಿಕೊಳ್ಳದಂತೆ ತಡೆಹಿಡಿಯಲಾಗಿದೆ.

ಮೊನ್ನೆಯಷ್ಟೇ ಕೃಷ್ಣ ಮೇಲ್ದಂಡೆ ಯೋಜನೆ ವಿಚಾರವಾಗಿ ನಮ್ಮ ಮೇಲೆ ಒತ್ತಡ ಹಾಕಿದ್ದಾರೆ. ಈಗಾಗಲೇ ರಾಜ್ಯದಲ್ಲಿ 1.50 ಲಕ್ಷ ಕೋಟಿ ಮೊತ್ತದ ನೀರಾವರಿ ಯೋಜನೆ ಕೆಲಸಗಳು ನಡೆಯುತ್ತಿವೆ. ಆದರೆ ನನ್ನ ಇಲಾಖೆ ಬಜೆಟ್ ಇರುವುದು 16 ಸಾವಿರ ಕೋಟಿ. ಇದರಲ್ಲಿ 50% ಹಣ ಹಳೆ ಸಾಲಕ್ಕೆ ಪಾವತಿಯಾಗುತ್ತಿದೆ. 25% ಹಣ ಭೂಸ್ವಾಧೀನ ಪ್ರಕ್ರಿಯೆಗೆ ಹೋಗುತ್ತದೆ. ಇನ್ನು 25% ಹಣ ಮಾತ್ರ ಉಳಿಯುತ್ತದೆ. ಈ ಯೋಜನೆ ನಮ್ಮ ಗಮನದಲ್ಲಿದೆ. ನಿಮ್ಮ ಕಾಲದಲ್ಲಿ 130 ಕೋಟಿ ವೆಚ್ಚದ ಈ ಯೋಜನೆಗೆ ಅನುಮತಿ ನೀಡಲಾಗಿದ್ದು, ನಾವು ಮಾತು ಕೊಟ್ಟಿದ್ದು, ಈ ಯೋಜನೆಯನ್ನು ಶೀಘ್ರ ಕೈಗೆತ್ತಿಕೊಳ್ಳುತ್ತೇವೆ ಎಂದು ಉಪಮುಖ್ಯಮಂತ್ರಿ ಜಲಸಂಪನ್ಮೂಲ ಸಚಿವರಾದ ಡಿ.ಕೆ. ಶಿವಕುಮಾರ್ (Dk Shivakumar) ವಿಧಾನಪರಿಷತ್ತಿನಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net