ಕೆ.ಆರ್​. ಸರ್ಕಲ್​ ಅಂಡರ್‌ಪಾಸ್‌ ದುರಂತ: ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕಿದ ಲೋಕಾಯುಕ್ತ ಐಜಿಪಿ

Underpass Tragedy
Published on

ಬೆಂಗಳೂರು: ಕೆ.ಆರ್.ಸರ್ಕಲ್ ಅಂಡರ್‌ಪಾಸ್‌ನಲ್ಲಿ ಮಳೆ ನೀರಿನಲ್ಲಿ ಕಾರು ಮುಳುಗಿ ಯುವತಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿತ್ತು. ಇದೀಗ ಘಟನಾ ಸ್ಥಳಕ್ಕೆ ಲೋಕಾಯುಕ್ತ ಐಜಿಪಿ ಸುಬ್ರಹ್ಮಣ್ಯೇಶ್ವರ್ ರಾವ್ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ, ಬಿಬಿಎಂಪಿ ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕಿದ್ದಾರೆ.

ಘಟನೆಗೆ ಕಾರಣವೇನು? ಏನೆಲ್ಲಾ ಸಮಸ್ಯೆ ಇತ್ತು ಎಂಬ ಬಗ್ಗೆ ಮಾಹಿತಿ ಪಡೆದಿದ್ದಾರೆ. ಘಟನಾ ಸ್ಥಳದಲ್ಲಿ ಟ್ಯಾಂಕರ್ ತರಿಸಿ ನೀರು ಹರಿಸುವ ಮೂಲಕ ನೀರು ರಾಜಕಾಲುವೆಗೆ ಸರಾಗವಾಗಿ ಹರಿದು ಹೋಗುತ್ತದೆಯೇ ಎಂದು ಪರಿಶೀಲನೆ ನಡೆಸಿದ್ದಾರೆ.

ಎಲ್ಲರಿಗೂ ಒಂದು ಪಾಠ

ಬಳಿಕ ಐಜಿಪಿ ಸುಬ್ರಹ್ಮಣ್ಯೇಶ್ವರ್ ರಾವ್ ಸುದ್ದಿಗಾರರೊಂದಿಗೆ ಮಾತನಾಡಿ, ಕೆ.ಆರ್.ಸರ್ಕಲ್ ಅಂಡರ್‌ಪಾಸ್ ದುರಂತ ಎಲ್ಲರಿಗೂ ಒಂದು ಪಾಠವಾಗಿದೆ. ಇದರಿಂದ ಎಚ್ಚೆತ್ತುಕೊಂಡು ಬೇರೆಡೆ ಅಂಡರ್ ಪಾಸ್‌ಗಳಲ್ಲಿ ಇಂತಹ ದುರ್ಘಟನೆಗಳು ನಡೆಯದಂತೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸ್ಥಳದಲ್ಲಿದ್ದ ಬಿಬಿಎಂಪಿ ಅಧಿಕಾರಿಗಳಿಗೆ ಸಲಹೆ ನೀಡಿದರು.

ಬೆಂಗಳೂರಿನಲ್ಲಿ ಮಳೆ ಸುರಿದಾಗ ಮಳೆಯ ನೀರು ರಾಜಕಾಲುವೆಗಳಲ್ಲಿ ಹರಿದು ಹೋಗದೆ ರಸ್ತೆಗಳಲ್ಲೇ ನಿಂತು ಕೆರೆಗಳಂತಾಗುತ್ತವೆ. ಇದರಿಂದ ಸಾಕಷ್ಟು ಅನಾಹುತಗಳು ಸಂಭವಿಸುತ್ತವೆ. ಕೂಡಲೇ ಜವಾಬ್ದಾರಿ ಹೊಂದಿರುವ ನೀವುಗಳು ಕಾರ್ಯಪ್ರವೃತ್ತರಾಗಿ ತುರ್ತು ಕಾಮಗಾರಿ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ವರದಿ ಸಲ್ಲಿಸುತ್ತೇವೆ

ಲೋಕಾಯುಕ್ತರ ನಿರ್ದೇಶನದನ್ವಯ ಲೋಕಾಯುಕ್ತ ಪೊಲೀಸ್ ಘಟಕದಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ತನಿಖೆಯ ಭಾಗವಾಗಿ ಲೋಕಾಯುಕ್ತ ಇಂಜಿನಿಯರಿಂಗ್ ಡಿವಿಷನ್ ಅಧಿಕಾರಿಗಳು ಹಾಗೂ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದೇವೆ. ಮೇಲ್ನೋಟಕ್ಕೆ ಇಲ್ಲಿರುವ ಒಳಚರಂಡಿ ವ್ಯವಸ್ಥೆಯಲ್ಲಿ ನೀರಿನ ಹರಿವು ಅಧಿಕವಾದ ಕಾರಣದಿಂದ ಅವಘಡ ಸಂಭವಿಸಿರುವುದು ಕಂಡುಬಂದಿದೆ. ಈ ಸಂದರ್ಭದಲ್ಲಿ ಇಲ್ಲಿರುವ ಸಮಸ್ಯೆಗಳನ್ನ ಪತ್ತೆ ಹಚ್ಚಿ. ನಗರದಲ್ಲಿರುವ ಬೇರೆ ಅಂಡರ್‌ಪಾಸ್‌ನಲ್ಲಿರುವ ಸಮಸ್ಯೆಗಳಿಗೂ ಸಹ ಜಂಟಿಯಾಗಿ ಪರಿಹಾರ ಕಂಡುಕೊಳ್ಳಬೇಕಿದೆ. ಜತೆಗೆ ಅವಘಡಕ್ಕೆ ಯಾರದ್ದಾದರೂ ನಿರ್ಲಕ್ಷ್ಯ ಕಾರಣವಾಗಿದ್ದರೆ ಅವರ ವಿರುದ್ಧ ಲೋಕಾಯುಕ್ತರಿಗೆ ವರದಿ ಸಲ್ಲಿಸುತ್ತೇವೆ’ ಎಂದರು.

ಏನಿದು ಪ್ರಕರಣ?

ಮೇ 21 ರಂದು ನಗರದಲ್ಲಿ ಸುರಿದ ಭಾರಿ ಮಳೆಗೆ ಕೆ.ಆರ್.ಸರ್ಕಲ್ ಅಂಡರ್‌ಪಾಸ್‌ನಲ್ಲಿ ಕಾರು ಮುಳುಗಿದ ಪರಿಣಾಮ ಇನ್ಫೋಸಿಸ್ ಉದ್ಯೋಗಿ ಭಾನುರೇಖಾ ಸಾವನ್ನಪ್ಪಿದ್ದರು. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರು, ಸ್ವಯಂ ಪ್ರೇರಿತ ಪ್ರಕರಣವಾಗಿ ಪ್ರಕರಣ ದಾಖಲಿಸಿಕೊಂಡು ಬಿಬಿಎಂಪಿ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net