ಕೊನೆಗೂ ನನಸಾಗದ ಡಿಕೆಶಿ ಕನಸು!

DKS
Published on

ಬೆಂಗಳೂರು: ಕೆಪಿಸಿಸಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಿ.ಕೆ. ಶಿವಕುಮಾರ್​ ಅವರ ಅದ್ಧೂರಿ ಪದಗ್ರಹಣದ ಕನಸು ಕನಸಾಗಿಯೇ ಉಳಿದಿದೆ.

ಎರಡು ತಿಂಗಳ ಹಿಂದೆಯೇ ಪದಗ್ರಹಣ ಮಾಡುವಂತೆ ಈ ಹಿಂದಿನ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದರು. ಆದರೆ, ದೊಡ್ಡ ಮಟ್ಟದಲ್ಲಿ ಜನರನ್ನು ಸೇರಿಸಿ ಪದಗ್ರಹಣ ಮಾಡುವುದಾಗಿ ಡಿಕೆಶಿ ತಿಳಿಸಿದ್ದರು.

ಇದಲ್ಲದೆ, ಸದನ ನಡೆಯುವಾಗ ಎಲ್ಲ ಶಾಸಕರು ಇರುತ್ತಾರೆ ಅವರ ಸಮ್ಮುಖದಲ್ಲಿ ಪದಗ್ರಹಣ ಮಾಡುವಂತೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಡಿಸಿಎಂ ಪರಮೇಶ್ವರ್​ ಹೇಳಿದ್ದರು. ಆದರೆ, ಅರಮನೆ ಮೈದಾನದಲ್ಲಿ ಬೃಹತ್ ಜನ ಸೇರಿಸಿ ಪದಗ್ರಹಣ ಮಾಡಲು ಡಿಕೆಶಿ ಪ್ಲಾನ್ ಮಾಡಿದ್ದರು.

ಇದರ ನಡುವೆ ಕಾರ್ಮಿಕರನ್ನು ಊರಿಗೆ ಸ್ಥಳಾಂತರಿಸುವ ವಿಚಾರದಲ್ಲಿ ಸರ್ಕಾರ ಟಿಕೆಟ್​ ದರ ನಿಗದಿಪಡಿಸಿದ್ದನ್ನು ಡಿಕೆಶಿ ವಿರೋಧಿಸಿದ್ದರು. ಕಾರ್ಮಿಕರನ್ನು ಉಚಿತವಾಗಿ ಸ್ಥಳಾಂತರ ಮಾಡಿ ಎಂದು ಕೆಪಿಸಿಸಿ ವತಿಯಿಂದ ಕೆಎಸ್​ಆರ್​ಟಿಸಿ ಎಂಡಿಗೆ 1 ಕೋಟಿ ರೂ. ಮೌಲ್ಯದ ಚೆಕ್ ನೀಡಲಾಗಿತ್ತು. ಆದರೆ, ಚೆಕ್​ನಲ್ಲಿ ಡಿಕೆಶಿ ಬದಲಾಗಿ ದಿನೇಶ್ ಗುಂಡೂರಾವ್ ಸಹಿ ಇದ್ದಿದ್ದು ಬಿಜೆಪಿ ನಾಯಕರ ಟೀಕೆಗೆ ಕಾರಣವಾಗಿತ್ತು.

ಇದೇ ವಿಚಾರಕ್ಕೆ ಡಿಕೆಶಿ ವಿರುದ್ಧ ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಇನ್ನೊಂದೆಡೆ ಕಂದಾಯ ಸಚಿವ ಆರ್ ಆಶೋಕ್ ಇದೊಂದು ಮೌಲ್ಯವಲ್ಲದ ಚೆಕ್​ ಎಂದು ಜರಿದಿದ್ದರು. ಇವರಿಗೆ ಚೆಕ್ ಪವರ್ ಇಲ್ಲ ಎಂದು ಡಿಕೆಶಿ ಕಾಲೆಳೆದಿದ್ದರು. ಇದೀಗ ಬಿಜೆಪಿ ನಾಯಕರ ಹೇಳಿಕೆ ಬೆನ್ನಲ್ಲೇ ಸರಳವಾಗಿ ಪದಗ್ರಹಣ ಮಾಡಲು ಡಿಕೆಶಿ ನಿರ್ಧಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net