ಮಳೆ, ಕಪಿಲತೀರ್ಥ ಜಲಪಾತಕ್ಕೆ ಜೀವಕಳೆ

ಹನುಮಸಾಗರ ಸಮೀಪದ ಕಪಿಲತೀರ್ಥ ಜಲಪಾತದಲ್ಲಿ ನೀರು ಧುಮ್ಮಿಕುತ್ತಿರುವುದು.
ಹನುಮಸಾಗರ ಸಮೀಪದ ಕಪಿಲತೀರ್ಥ ಜಲಪಾತದಲ್ಲಿ ನೀರು ಧುಮ್ಮಿಕುತ್ತಿರುವುದು.
Published on: 

ಹನುಮಸಾಗರ: ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಕಳೆದ ಎರಡ್ಮೂರು ದಿನಗಳಿಂದ ಸುರಿದ ಮಳೆಗೆ ಸಮೀಪದ ಕಪಿಲತೀರ್ಥ ಜಲಪಾತಕ್ಕೆ ಜೀವ ಕಳೆ ಬಂದಿದ್ದು, ಮೈದುಂಬಿ ಹರಿದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಕಲ್ಯಾಣ ಕರ್ನಾಟಕದ ಏಕೈಕ ಜಲಪಾತವಾದ ಕಬ್ಬರಗಿ ಗ್ರಾಮದ ಕಪಿಲತೀರ್ಥ ಜಲಪಾತ ಮಿನಿಜೋಗವೆಂದು ಹೆಸರು ಪಡೆದಿದೆ. ಬೇಸಿಗೆಯಲ್ಲಿ ನೀರಿಲ್ಲದೆ ಬತ್ತಿ ಹೋಗಿದ್ದ ಜಲಪಾತದಲ್ಲಿ ಸದ್ಯ ನೀರು ಧುಮ್ಮಿಕ್ಕುತ್ತಿದೆ.

ಬೆಟ್ಟದ ತಪ್ಪಲಿನಲ್ಲಿ 25 ಅಡಿ ಎತ್ತರದಿಂದ ಬೀಳುವ ನೀರಿನ ಕೆಳಗೆ ನಿಂತು ಸ್ನಾನ ಮಾಡಿ, ಮಜಾ ಪಡೆಯಲು ಕೊಪ್ಪಳ ಸೇರಿ ಸುತ್ತಲಿನ ಜಿಲ್ಲೆಗಳಿಂದ ಪ್ರವಾಸಿಗರು ಬರುತ್ತಿದ್ದಾರೆ.

ನೀರು ಬೀಳುವ ಅಡಿಯಲ್ಲಿ ನಿಸರ್ಗವೇ ಹಾಸು ಬಂಡೆಯನ್ನು ನಿರ್ಮಿಸಿರುವುದರಿಂದ ಬಂಡೆಗೆ ಅಪ್ಪಳಿಸಿದ ನೀರು ಪಕ್ಕದಲ್ಲಿ ನಿಂತ ಜನರಿಗೆ ಚಿಮ್ಮಿ ಹಿತಾನುಭವ ನೀಡುತ್ತಿದೆ.

ಭೋರ್ಗೆರೆದು ಬೀಳುವ ನೀರು ನೋಡುಗರ ಕಣ್ಮನ ತಣಿಸುತ್ತಿದೆ. ಧುಮ್ಮಿಕ್ಕುತ್ತಿರುವ ಜಲಪಾತ ವೀಕ್ಷಿಸಲು, ನೀರಿಗೆ ಮೈಯೊಡ್ಡಲು ಪ್ರವಾಸಿಗರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net