ಎರಡ್ಮೂರು ದೊಡ್ಡದೊಡ್ಡ ತಲೆಗಳು ಉರುಳುತ್ತವೆ, ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬರುತ್ತೆ: ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು

kodi muth
Published on

ಹೊಸಪೇಟೆ: ಒಲೆ ಹೊತ್ತಿ ಉರಿದರೆ ನಿಲ್ಲಬಹುದು. ಧರೆಯೇ ಹೊತ್ತಿ ಉರಿದರೆ ನಿಲ್ಲದು. ರಾಜ್ಯ ರಾಜಕೀಯದಲ್ಲಿ ಒಂದು ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಕೋಡಿಮಠದ ಪೀಠಾಧ್ಯಕ್ಷ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದರು.

ನಗರದ ಬಿಜೆಪಿ ನಾಯಕಿ ರಾಣಿ ಸಂಯುಕ್ತ ಅವರ ಮನೆಯಲ್ಲಿ ಶುಕ್ರವಾರ ಪಾದಪೂಜೆ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೋಡಿಮಠದ ಶ್ರೀಗಳು, ಒಲೆ ಹೊತ್ತಿ ಉರಿದರೆ ನಿಲ್ಲಬಹುದು. ಅದರಿಂದ ಅಡುಗೆಯನ್ನೂ ಮಾಡಬಹುದು. ಆದರೆ, ಭೂಮಿಯೇ ಹೊತ್ತಿ ಉರಿದರೆ ಯಾರಿಗೂ ನಿಲ್ಲಲು ಸಾಧ್ಯವಿಲ್ಲ. 2023ರಲ್ಲಿ ಜಾಗತಿಕವಾಗಿ ಅಂತಹ ಪ್ರಸಂಗ ಎದುರಾಗುವ ಸಾಧ್ಯತೆಗಳಿವೆ ಎಂದರು.

ಎರಡ್ಮೂರು ದೊಡ್ಡ ದೊಡ್ಡ ತಲೆಗಳು ಉರುಳುತ್ತವೆ. ಸಾಧು- ಸಂತರಿಗೆ ತೊಂದರೆಯಾಗುವ ಲಕ್ಷಣಗಳಿವೆ. ಈ ಬಾರಿ ಕೋವಿಡ್ ಹಿಂದಿನಂತೆ ದೊಡ್ಡ ಪ್ರಮಾಣದಲ್ಲಿ ಕೆಡಕು ಮಾಡದು. ರಾಜ್ಯ ರಾಜಕೀಯದಲ್ಲಿ ಎಷ್ಟೇ ಗೊಂದಲಗಳಿದ್ದರೂ, ಈ ಬಾರಿ ಸ್ಪಷ್ಟ ಬಹುಮತದಿಂದ ಒಂದೇ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಭವಿಷ್ಯ ನುಡಿದರು.

ಹಿಂದೂ ಸಾಂಪ್ರದಾಯದ ಪ್ರಕಾರ ಯುಗಾದಿ ಫಲ ಹೇಳಲಾಗುತ್ತದೆ. ಮಳೆ, ಬೆಳೆ, ವ್ಯಾಪಾರ, ಜನ ಸಾಮಾನ್ಯರ ಬದುಕು, ಬವಣೆ, ರಾಜಕೀಯ ಸ್ಥಿತಿಗತಿ ತಿಳಿಯುತ್ತದೆ. ಅದರಂತೆ ಸಂಕ್ರಾಂತಿ ಫಲವನ್ನೂ ಹೇಳುವ ರೂಢಿಯಿದೆ. ಅದು ರಾಜ ಮಹಾರಾಜರು, ಶ್ರೀಮಂತರು, ವ್ಯಾಪಾರಸ್ಥರಿಗೆ ಅನ್ವಯವಾಗುತ್ತದೆ. ಸಂಕ್ರಾಂತಿ ಬಳಿಕವೂ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net