5 ವರ್ಷದ ಮಗುವಿನ ಪ್ರಾಣ ಉಳಿಸಿಕೊಳ್ಳಲು ನೆರವಾಗಿ… ಮದ್ದೂರು ಮೂಲದ ದಂಪತಿ ಮನವಿ

manday boy
Published on

ಮಂಡ್ಯ: ಥಲಸ್ಸೆಮಿಯಾ ಕಾಯಿಲೆಯಿಂದ ಬಳಲುತ್ತಿರುವ ತಮ್ಮ ಮಗುವಿನ ಚಿಕಿತ್ಸೆಗಾಗಿ ಸಹಾಯ ಮಾಡುವಂತೆ ಮದ್ದೂರು ತಾಲೂಕು ಬಿದರಕೋಟೆಯ ಪ್ರಸನ್ನಕುಮಾರ್​ ಹಾಗೂ ರಮ್ಯಾ ದಂಪತಿ ಮನವಿ ಮಾಡಿದರು.

ಐದು ವರ್ಷ ವಯಸ್ಸಿನ ಅಚ್ಯುತ್​ಕುಮಾರ್​ ಥಲಸ್ಸೆಮಿಯಾ ಕಾಯಿಲೆಯಿಂದ ಬಳಲುತ್ತಿದ್ದಾನೆ. ಚಿಕಿತ್ಸೆಗಾಗಿ ಈಗಾಗಲೇ ಲಕ್ಷಾಂತರ ರೂ. ಖರ್ಚಾಗಿದೆ. ದಾನಿಗಳು ಮಗುವಿನ ಚಿಕಿತ್ಸೆಗೆ ಸಹಾಯ ಮಾಡಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಕೋರಿದರು.

ಮೂರೂವರೆ ವರ್ಷದವನಿದ್ದಾಗ ಅಚ್ಯುತ್​ಕುಮಾರ್​ಗೆ ಜ್ವರ ಬಂದಿತ್ತು. ಆಸ್ಪತ್ರೆಗೆ ಕರೆದೊಯ್ದಾಗ ಅನಿಮಿಯಾ ಎಂದು ಹೇಳಿದ್ದರು. ನಂತರದ ದಿನಗಳಲ್ಲಿ ಮಗುವಿನ ಆರೋಗ್ಯ ಕ್ಷೀಣಿಸುತ್ತಾ ಬಂತು. ನಾವು ಬೇರೆ ಬೇರೆ ಆಸ್ಪತ್ರೆಗಳಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದೆವು. ಆದರೂ ಗುಣಮುಖವಾಗಲಿಲ್ಲ. ಬಳಿಕ ನಾರಾಯಣ ಆಸ್ಪತ್ರೆಯಲ್ಲಿ ತೋರಿಸಿದಾಗ ಥಲಸ್ಸೆಮಿಯಾ ಕಾಯಿಲೆಯಿಂದ ಬಳಲುತ್ತಿರುವುದಾಗಿ ತಿಳಿದುಬಂತು. ಈ ಹಿನ್ನೆಲೆಯಲ್ಲಿ ಹಲವು ಚಿಕಿತ್ಸೆ ಕೊಡಿಸಲಾಯಿತಾದರೂ ಗುಣವಾಗಲಿಲ್ಲ ಎಂದು ಅಳಲು ತೋಡಿಕೊಂಡರು.

ಮಗುವಿಗೆ ಪ್ರತಿ ತಿಂಗಳು ಒಂದು ಅಥವಾ ಎರಡು ಬಾಟಲಿ​ ರಕ್ತ ಹಾಕಿಸಬೇಕು. ಆತನ ದೇಹದಲ್ಲಿ ರಕ್ತ ಉತ್ಪತ್ತಿಯಾಗುವುದಿಲ್ಲ, ಬದಲಿಗೆ ಕಡಿಮೆಯಾಗುತ್ತದೆ. ಆ ವೇಳೆ ಮಗುವಿನ ಚಟುವಟಿಕೆಯೂ ಕ್ಷೀಣಿಸುತ್ತದೆ. ರಕ್ತ ಕೊಡಿಸಿದ ಮೇಲೆ ಸಾಮಾನ್ಯರಂತಾಗುತ್ತಾನೆ. ಇದು ಈ ಕಾಯಿಲೆಯ ಲಕ್ಷಣವಾಗಿದೆ. ಇದಕ್ಕೆ ಶಸ್ತ್ರಚಿಕಿತ್ಸೆಯೇ ಪರಿಹಾರ. ಅದಕ್ಕೆ ಸುಮಾರು 22 ಲಕ್ಷ ರೂ. ಹಾಗೂ ಒಂದು ವರ್ಷದ ಚಿಕಿತ್ಸೆ ಸೇರಿದಂತೆ ಒಟ್ಟು 30 ಲಕ್ಷ ರೂ. ತಗುಲುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಇಷ್ಟು ದೊಡ್ಡ ಮೊತ್ತದ ಹಣ ನಮ್ಮಲ್ಲಿ ಇಲ್ಲ. ನಾವು ಇರುವ ತುಂಡು ಭೂಮಿಯಲ್ಲಿ ಕೃಷಿ ಮಾಡಿಕೊಂಡು ಬದುಕುತ್ತಿದ್ದೇವೆ. ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ದಾನಿಗಳು ಚಿಕಿತ್ಸೆಗೆ ಸಹಾಯ ಮಾಡಿ ಮಗುವಿನ ಪ್ರಾಣ ಉಳಿಸಬೇಕು ಎಂದು ಮನವಿ ಮಾಡಿದರು.

ದಾನಿಗಳು ಬ್ಯಾಂಕ್​ ಆಫ್​ ಬರೋಡ ಬಿದರಕೋಟೆ ಶಾಖೆಯಲ್ಲಿ ಮಗುವಿನ ಉಳಿತಾಯ ಖಾತೆ (ಸಂಖ್ಯೆ 73540100002158, ಐಎಫ್​ಎಸ್​ಸಿ ಕೋಡ್​ BARBOVJBIKO)ಗೆ ಹಣ ಕಳಿಸಬಹುದು. ಮಾಹಿತಿಗೆ ಮೊ.ಸಂ 9886400633 ಸಂಪರ್ಕಿಸಬಹುದೆಂದು ಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net