

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆದ ಕಿರುಷಷ್ಠಿ ಸಾಂಸ್ಕೃತಿಕ ವೈಭವ 4ನೇ ದಿನ ವೈವಿಧ್ಯಮಯವಾಗಿ ನೆರವೇರಿತು.
ಕಲಾಗ್ರಾಮ ಕಲ್ಮಡ್ಕದ ಪ್ರಸ್ತುತಿಯಲ್ಲಿ ರಂಗ ನಿರ್ದೇಶಕ ಸಾಯಿ ನಾರಾಯಣ ಕಲ್ಮಡ್ಕ ನಿರ್ದೇಶನದಲ್ಲಿ ಪ್ರದರ್ಶಿತವಾದ ಡಾ.ಶಿವರಾಮ ಕಾರಂತರ ಚೋಮನ ದುಡಿ ಕಾದಂಬರಿ ಆಧಾರಿತ ತುಳು ನಾಟಕದ ಮೂಲಕ 2025ನೇ ಸಾಲಿನ ಕಿರುಷಷ್ಠಿ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಪನ್ನವಾದವು.
*ಮಕ್ಕಳ ಯಕ್ಷಗಾನ: ಅವನಿ ನಾಯಕ್ ಪುತ್ತೂರು ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ನೆರವೇರಿತು. ವಯಲಿನ್‌ನಲ್ಲಿ ವಿದ್ವಾನ್ ಶ್ರೀರಾಮ ಕಾಂಚನ, ಮೃದಂಗದಲ್ಲಿ ವಿದ್ವಾನ್ ವಿಶ್ವಮಿಹಿರ ಸಹಕಾರ ನೀಡಿದರು. ಬಳಿಕ ಕೌಸ್ತುಭ ಕಲಾ ಸೇವಾ ಟ್ರಸ್ಟ್ ಕೂಜುಗೋಡು ಅವರಿಂದ ಮಕ್ಕಳ ಯಕ್ಷಗಾನ ಶ್ರೀರಾಮ ದರ್ಶನ ಪ್ರದರ್ಶಿತವಾಯಿತು. ಯಕ್ಷಗುರು ಗಿರೀಶ್ ಗಡಿಕಲ್ಲು ಅವರ ನಿರ್ದೇಶಿಸಿದ್ದರು. ಹಿಮ್ಮೇಳದಲ್ಲಿ ಭಾಗವತರಾಗಿ ರಚನಾ ಚಿದ್ಗಲ್, ಮದ್ದಳೆಯಲ್ಲಿ ವೆಂಕಟ್ರಮಣ ಆಚಾರ್ಯ ಕಲ್ಮಡ್ಕ, ಚೆಂಡೆಯಲ್ಲಿ ಲಕ್ಷ್ಮೀಶ ಶಗ್ರಿತ್ತಾಯ ಪಂಜ, ಚಕ್ರತಾಳದಲ್ಲಿ ಹರ್ಷಿತ್ ಬಾಳುಗೋಡು ಸಹಕರಿಸಿದರು. ಮುಮ್ಮೇಳದಲ್ಲಿ ಕಾರ್ತಿಕ್ ಪಂಜ, ಅಂಶು ಮಾವಿನಕಟ್ಟೆ, ರೇವಂತ್, ಮನ್ವಿತ್, ತನುಷ್, ಸ್ಕಂಧ, ಜನಿತ್, ಗಗನ್, ಗಗನ್ ಬಿ.ಎಂ, ಚೇತನ್ ಡೆಕ್ಕಳ, ಜ್ಞಾನಶ್ರೀ, ಧೃತಿ ಕುಚ್ಚಾಳ, ಶ್ರೀನಿವಾಸ, ತನ್ಮಯಿ ಆಳ್ವ, ತನುಷ್ ಪಾತ್ರ ನಿರ್ವಹಿಸಿದರು.
ಕಲಾವಿದರನ್ನು ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಗೌರವಿಸಿದರು. ಸಹಾಯಕ ಕಾರ್ಯನಿರ್ವಹಣಾಧಿಕಾರಿ ಎಸ್.ಜೆ.ಯೇಸುರಾಜ್, ಮಾಸ್ಟರ್ ಪ್ಲಾನ್ ಸಮಿತಿಯ ಸ್ಥಳೀಯ ಸದಸ್ಯರಾದ ಸತೀಶ್ ಕೂಜುಗೋಡು, ಪವನ್ ಎಂ.ಡಿ. ಉಪಸ್ಥಿತರಿದ್ದರು.