ಬಂಟ್ವಾಳ: ಇಲ್ಲಿನ ಸಮಾಜ ಸೇವಾ ಸಹಕಾರಿ ಸಂಘದ ಪಡೀಲ್ ಶಾಖೆಯಲ್ಲಿ ನಡೆದ ಘಟನೆಯನ್ನು ಮುಂದಿಟ್ಟು ಬ್ಯಾಂಕ್‌ನ ಮಾಜಿ ನಿರ್ದೇಶಕರೊಬ್ಬರು ದಾಖಲಿಸಿದ್ದ ದೂರಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ಸಂಘದ ಅಧ್ಯಕ್ಷ ಸುರೇಶ್ ಕುಲಾಲ್ ತಿಳಿಸಿದರು.
ಬಂಟ್ವಾಳ ಬೈಪಾಸ್‌ನ ಸಂಘದ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಿನ ಆಡಳಿತ ಮಂಡಳಿತ ಮೇಲೆ ವೈಯಕ್ತಿಕ ದ್ವೇಷ ತೀರಿಸಿಕೊಳ್ಳಲು ಹಾಗೂ ಮುಂದಿನ ಫೆಬ್ರವರಿ ತಿಂಗಳಿನಲ್ಲಿ ನಡೆಯುವ ಆಡಳಿತ ಮಂಡಳಿಯ ಚುನಾವಣೆಯ ದೃಷ್ಟಿಯಿಂದ ಸುಳ್ಳು ದಾಖಲೆ ಸಂಗ್ರಹಿಸಿ ಬ್ಯಾಂಕ್‌ಗೆ ನಷ್ಟ ಉಂಟುಮಾಡುವ ಹಾಗೂ ಆಡಳಿತ ಮಂಡಳಿಯ ತೇಜೋವಧೆ ಮಾಡುವ ದುರುದ್ದೇಶದಿಂದ ಸೆನ್ ಪೊಲೀಸ್ ಠಾಣೆಯಲ್ಲಿ ಈ ವಿಚಾರಕ್ಕೆ ಸಂಬಂಧಪಡದ ವ್ಯಕ್ತಿಗಳ ವಿರುದ್ಧ ಸುಳ್ಳು ದೂರನ್ನು ಸಲ್ಲಿಸಲಾಗಿದ್ದು, ಈ ದೂರು ಕಾನೂನುಬಾಹಿರ ಎಂದು ಪ್ರಾಥಮಿಕ ಹಂತದಲ್ಲಿ ಮನಗಂಡಿರುವ ಉಚ್ಚನ್ಯಾಯಾಲಯ ಪ್ರಕರಣಕ್ಕೆ ತಡೆಯಾಜ್ಞೆ ನೀಡಿದೆ ಎಂದರು.
ಪುತ್ತೂರು ಈಶ್ವರಮಂಗಲದ ಅಬೂಬಕ್ಕರ್ ಸಿದ್ದೀಕ್ ಎಂಬುವವರು 19 ಖಾತೆಗಳಲ್ಲಿ ಚಿನ್ನಾಭರಣ ಅಡವಿರಿಸಿ 2.11 ಕೋಟಿ ರೂ. ಸಾಲ ಪಡೆದಿದ್ದರು. ಸಾಲವನ್ನು ಶಾಖಾ ಪ್ರಬಂಧಕ ಹಾಗೂ ಚಿನ್ನಾಭರಣ ಪರೀಕ್ಷಿಸುವ ಅಧಿಕೃತ ಅಪ್ರೈಸರ್ ವರದಿಯಂತೆ ಬಿಡುಗಡೆಗೊಳಿಸಲಾಗಿತ್ತು. ಅಬೂಬಕ್ಕರ್ ಸಿದ್ದೀಕ್ ಸಾಲ ಮರುಪಾವತಿಸದೆ ಇದ್ದಾಗ ಅಡವಿರಿಸಿದ ಚಿನ್ನಾಭರಣಗಳನ್ನು ನಿಯಾಮನುಸಾರ ಏಲಂ ನಡೆಸಿ ಆಭರಣ ಸಾಲ ಚುಕ್ತ್ತಾ ಆಗಿದೆ. ಏಲಂ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಅಪ್ರೈಸರ್ ವಿವೇಕ್ ಆಚಾರ್ಯ ಏಲಂನಲ್ಲಿ ಚಿನ್ನ ಪಡೆದಿದ್ದು, ಈ ದೂರನ್ನು ತನಿಖೆ ನಡೆಸಿದ ಅಧಿಕಾರಿಗಳು ಸಹಕಾರಿ ಸಂಘಕ್ಕೆ ಯಾವುದೇ ರೀತಿಯ ಮೋಸ ಆಗಿಲ್ಲ ಎಂಬ ನಿಲುವಿಗೆ ಬಂದು ದೂರನ್ನು ವಜಾಗೊಳಿಸಿದ್ದರು. ಶಾಖೆಯಲ್ಲಿ ಆಭರಣ ಈಡಿನ ಸಾಲಗಳಲ್ಲಿ ಮಿತಿಗಿಂತ ಹೆಚ್ಚು ಸಾಲ ಮಂಜೂರಾತಿ ಮಾಡಿದ ಮತ್ತು ಇತರ ವಿಷಯಗಳಲ್ಲಿ ಕರ್ತವ್ಯ ಲೋಪದ ಸಂಶಯ ಬಂದ ಕಾರಣ ವ್ಯವಸ್ಥಾಪಕರ ಕರ್ತವ್ಯ ಲೋಪ ಎಂದು ಪರಿಗಣಿಸಿ ಅವರನ್ನು ದೀರ್ಘಾವಧಿ ರಜೆಯಲ್ಲಿ ಕಳುಹಿಸಲಾಗಿದೆ. ಈ ಪ್ರಕ್ರಿಯೆಯಿಂದಾಗಿ ಬ್ಯಾಂಕ್‌ಗಾಗಲಿ, ಯಾವುದೇ ಗ್ರಾಹಕರಿಗಾಗಲಿ ತೊಂದರೆ ಉಂಟಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಬ್ಯಾಂಕ್‌ನ ಹಿತರಕ್ಷಣೆಯನ್ನು ಕಾಯ್ದುಕೊಳ್ಳಲಾಗಿದೆ ಎಂದು ತಿಳಿಸಿದರು.
ಸಂಘದ ಉಪಾಧ್ಯಕ್ಷ ಪದ್ಮನಾಭ ವಿ.ಕುಲಾಲ್, ನಿರ್ದೇಶಕರಾದ ಅರುಣ್ ಕುಮಾರ್, ರಮೇಶ್ ಸಾಲ್ಯಾನ್ ಸಂಚಯಗಿರಿ, ಜಯಂತಿ, ಜನಾರ್ದನ ಬೊಂಡಾಲ, ರಮೇಶ್ ಸಾಲ್ಯಾನ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.