ಬಳ್ಳಾರಿಯಲ್ಲಿ ಕಿರಾತಕ ಸಿನಿಮಾ ಸ್ಟೈಲ್​ ಮದುವೆ! ನಂತ್ರ ನಡೆದಿದ್ದು ಭಾರಿ ಹೈಡ್ರಾಮ, ಗೋಗರೆದ ಯುವಕ

Kirataka Style Marriage
Published on

ಬಳ್ಳಾರಿ: ನಟ ಯಶ್​ ಅಭಿನಯದ ಸೂಪರ್​ ಹಿಟ್​ ಕಿರಾತಕ ಸಿನಿಮಾವನ್ನು ಬಹುತೇಕರು ನೋಡಿರುತ್ತಾರೆ. ಕ್ಲೈಮ್ಯಾಕ್ಸ್​ನಲ್ಲಿ ನಟ ಯಶ್​, ತನ್ನ ಪ್ರೇಯಸಿಯನ್ನು ಕಾರಿನಲ್ಲಿ ಕರೆದೊಯ್ದು, ದೇವಸ್ಥಾನದ ಮುಂದೆ ನಿಲ್ಲಿಸಿ, ಕಾರಿನ ಒಳಗಡೆಯೇ ಪ್ರೇಯಸಿಗೆ ತಾಳಿ ಕಟ್ಟುವ ದೃಶ್ಯವಿದೆ. ಅದೇ ಮಾದರಿಯಲ್ಲಿ ಬಳ್ಳಾರಿಯಲ್ಲೊಂದು ಘಟನೆ ನಿಜವಾಗಿಯೂ ನಡೆದಿದೆ.

ಪ್ರೇಮಿಗಳಿಬ್ಬರು ಕಿರಾತಕ ಸಿನಿಮಾ ಶೈಲಿಯಲ್ಲೇ ಮದುವೆಯಾಗಿದ್ದಾರೆ. ರಸ್ತೆಯಲ್ಲೇ ಕಾರು ನಿಲ್ಲಿಸಿ, ಪರಸ್ಪರ ಹಾರ ಬದಲಿಸಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಪ್ರೇಮಿಗಳನ್ನು ಬಳ್ಳಾರಿಯ ತೆಕ್ಕಲಕೋಟೆಯ ಮೂಲದ ಶಿವಪ್ರಸಾದ್ ಹಾಗೂ ಕೊಪ್ಪಳ ಮೂಲದ ಅಮೃತಾ ಎಂದು ಗುರುತಿಸಲಾಗಿದೆ. ಆದರೆ, ಇಬ್ಬರ ಪ್ರೇಮ ವಿವಾಹಕ್ಕೆ ಯುವತಿ ಪಾಲಕರು ವಿರೋಧ ವ್ಯಕ್ತಪಡಿಸಿದ್ದು, ಈ ಪ್ರಕರಣ ಪೊಲೀಸ್​ ಠಾಣೆಯ ಮೆಟ್ಟಿಲೇರಿದೆ.

ಮದುವೆ ಬಳಿಕ ಯುವತಿಯನ್ನು ಬಳ್ಳಾರಿ ಶಾಂತಿಧಾಮ ಸಾಂತ್ವನ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿತ್ತು. ಆಕೆಯನ್ನು ಪೊಲೀಸರು ವಿಚಾರಣೆ ನಡೆಸಿದಾಗ ಒಂದು ಬಾರಿ ಪೋಷಕರು ಬೇಕೆಂದು, ಮತ್ತೊಂದು ಬಾರಿ ಪ್ರೇಮಿ ಬೇಕು ಅಂತ ಯುವತಿ ದ್ವಂದ್ವ ಹೇಳಿಕೆ ನೀಡಿದ್ದಳು. ಇದರಿಂದಾಗಿ ಶಾಂತಿಧಾಮದ ಮುಂದೆ ಹೈಡ್ರಾಮವು ನಡೆಯಿತು. ಈ ವೇಳೆ ಸಿನಿಮೀಯ ರೀತಿಯಲ್ಲಿ ಯುವತಿಯನ್ನು ಎಳೆದೊಯ್ಯಲು ಪಾಲಕರು ಯತ್ನಿಸಿದರು. ಹೀಗಾಗಿ ಕೆಲಕಾಲ ಸಾಂತ್ವನ ಕೇಂದ್ರ ಮುಂದೆ ಗೊಂದಲದ ವಾತಾವರಣ ಉಂಟಾಯಿತು. ಶಿವಪ್ರಸಾದ್ ಹಾಗೂ ಅಮೃತಾ ಪಾಲಕರ ನಡುವೆ ಗಲಾಟೆಯು ನಡೆಯಿತು.

ಗಲಾಟೆಯ ನಡುವೆ ಯುವತಿ ತನಗೆ ತನ್ನ ಗಂಡ ಬೇಕು ಅಂತಾ ಕೂಗಾಡಿಳು. ಆದರೆ, ಆಕೆಯನ್ನು ಬಲವಂತವಾಗಿ ಎಳೆದೊಯ್ದು ಕಾರು ಹತ್ತಿಸಲು ಪಾಲಕರು ಯತ್ನಿಸಿದರು. ಆದರೆ, ಶಿವಪ್ರಸಾದ್​, ಕಾರನ್ನು ಅಡ್ಡಗಟ್ಟಿ ತನ್ನ ಪ್ರೇಯಸಿಗಾಗಿ ತುಂಬಾ ಗೊಗರೆದನು. ಪೊಲೀಸರ ಮುಂದೆಯೇ ಈ ಹೈಡ್ರಾಮ ನಡೆಯಿತು.

ಅಮೃತಾ ಕೂಡ ತನ್ನ ಪಾಲಕರೊಂದಿಗೆ ಕಾರು ಹತ್ತಲು ನಿರಾಕರಿಸಿದಳು. ಇತ್ತ ಶಿವಪ್ರಸಾದ್​ ನನಗೆ ಹೆಂಡ್ತಿನೂ ಬೇಕು ಮತ್ತು ರಕ್ಷಣೆನೂ ಬೇಕೆಂದು ಇಡೀ ರಾತ್ರಿ ಸಾಂತ್ವನ ಕೇಂದ್ರ ಮುಂದೆ ಧರಣಿ ಕುಳಿತನು. ಕೊನೆಗೆ ಪಾಲಕರು ಅಮೃತಾಳನ್ನು ಸಾಂತ್ವನ ಕೇಂದ್ರದಲ್ಲಿ ಬಿಟ್ಟು ಹೋದರು. ಹುಡುಗಿ ಮೇಲ್ಜಾತಿ ಮತ್ತು ಹುಡುಗ ಕೆಳ ಜಾತಿ ಎಂಬ ಕಾರಣಕ್ಕೆ ಯುವತಿ ಪಾಲಕರು ಪ್ರೇಮ ವಿವಾಹಕ್ಕೆ ಒಪ್ಪಿಲ್ಲ ಎಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net