More

    “ಸತ್ಯ ಮೇಲುಗೈ ಸಾಧಿಸಿದೆ”: ಹಿಂಡನ್‌ಬರ್ಗ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್​ ತೀರ್ಪು ಸ್ವಾಗತಿಸಿದ ಗೌತಮ್ ಅದಾನಿ

    ನವದೆಹಲಿ: ಹಿಂಡನ್‌ಬರ್ಗ್ ವಿವಾದದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಸತ್ಯದ ವಿಜಯ ಎಂದು ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಸ್ವಾಗತಿಸಿದ್ದಾರೆ.
    ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ಪೋಸ್ಟ್‌ ಹಾಕಿರುವ ಅದಾನಿ ಅವರು “ನಮ್ಮೊಂದಿಗೆ ನಿಂತವರಿಗೆ ಕೃತಜ್ಞರಾಗಿರುತ್ತೇನೆ” ಎಂದು ಹೇಳಿದ್ದಾರೆ.

    ಹಿಂಡನ್‌ಬರ್ಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಡವಾಳ ಮಾರುಕಟ್ಟೆ ನಿಯಂತ್ರಕವಾದ ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ತನಿಖೆಯನ್ನು ಅನುಮಾನಿಸಲು ಜಾರ್ಜ್ ಸೊರೊಸ್ ನೇತೃತ್ವದ ಒಸಿಸಿಆರ್‌ಪಿ ವರದಿಯು ಆಧಾರವಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿರುವುದು ಅದಾನಿ ಸಮೂಹಕ್ಕೆ ಬೃಹತ್​ ವಿಜಯವನ್ನು ತಂದುಕೊಟ್ಟಿದೆ.

    “ಗೌರವಾನ್ವಿತ ಸುಪ್ರೀಂ ಕೋರ್ಟ್‌ನ ತೀರ್ಪು ಇದನ್ನು ತೋರಿಸುತ್ತದೆ: ಸತ್ಯವು ಮೇಲುಗೈ ಸಾಧಿಸಿದೆ. ಸತ್ಯಮೇವ ಜಯತೆ. ನಮ್ಮ ಬೆಂಬಲಕ್ಕೆ ನಿಂತವರಿಗೆ ನಾನು ಕೃತಜ್ಞನಾಗಿದ್ದೇನೆ. ಭಾರತದ ಬೆಳವಣಿಗೆಯ ಕಥೆಗೆ ನಮ್ಮ ವಿನಮ್ರ ಕೊಡುಗೆ ಮುಂದುವರಿಯುತ್ತದೆ. ಜೈ ಹಿಂದ್” ಎಂದು ಅದಾನಿ ಅವರು ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ಹೇಳಿದ್ದಾರೆ. 

    ತೀರ್ಪು ಪ್ರಕಟಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ಸುಪ್ರೀಂ ಕೋರ್ಟ್ ಪೀಠವು, ಈ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ವರ್ಗಾಯಿಸಲು ಯಾವುದೇ ಆಧಾರಗಳಿಲ್ಲ ಎಂದೂ ಹೇಳಿದೆ.

    ಅಮೆರಿಕ ಮೂಲದ ಕಿರು ಮಾರಾಟಗಾರ ಹಿಂಡೆನ್‌ಬರ್ಗ್ ರಿಸರ್ಚ್‌ನ ಆರೋಪಗಳಿಗೆ ಸಂಬಂಧಿಸಿದ 24 ಪ್ರಕರಣಗಳಲ್ಲಿ 22 ಪ್ರಕರಣಗಳನ್ನು ಸೆಬಿ ತನಿಖೆ ಮಾಡಿದೆ. ಉಳಿದ ಎರಡು ಪ್ರಕರಣಗಳ ತನಿಖೆಯನ್ನು ಪೂರ್ಣಗೊಳಿಸಲು ಸುಪ್ರೀಂ ಕೋರ್ಟ್ ಸೆಬಿಗೆ ಮೂರು ತಿಂಗಳ ಕಾಲಾವಕಾಶ ನೀಡಿದೆ.

    ಹಿಂಡೆನ್‌ಬರ್ಗ್ ಸಂಸ್ಥೆಯು ಮಾರುಕಟ್ಟೆಯನ್ನು ದುರ್ಬಲಗೊಳಿಸಲು ನಿಯಮಗಳನ್ನು ನಿರ್ಲಕ್ಷಿಸಿದೆಯೇ ಎಂದು ಪರಿಶೀಲಿಸಿ ಕ್ರಮ ಕೈಗೊಳ್ಳಲು ಸರ್ಕಾರ ಮತ್ತು ಸೆಬಿಗೆ ಸುಪ್ರೀಂ ಕೋರ್ಟ್ ಆದೇಶಿಸಿರುವುದು ಕೂಡ ಅದಾನಿ ಸಮೂಹಕ್ಕೆ ಮತ್ತೊಂದು ಪ್ರಮುಖ ಗೆಲುವು ತಂದುಕೊಟ್ಟಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts