

ಉಳ್ಳಾಲ: ಹಲವು ಸಮಯಗಳಿಂದ ರಾಷ್ಟ್ರೀಯ ಹೆದ್ದಾರಿ 66ರ ಕೆ.ಸಿ.ರೋಡ್ ರಸ್ತೆಬದಿ ರಾಶಿ ಬಿದ್ದಿದ್ದ ತ್ಯಾಜ್ಯ ತೆರವುಗೊಂಡಿದೆ. ಸೋಮೇಶ್ವರ ಪುರಸಭೆಯ ನಿರ್ಲಕ್ಷೃದ ವಿರುದ್ಧ ಜಿಲ್ಲಾಧಿಕಾರಿಗಳೇ ಚಾಟಿ ಬೀಸಿದ್ದು ಸ್ಥಳದಲ್ಲಿ ಸಿಸಿ ಕ್ಯಾಮರಾ ಕಣ್ಗಾವಲೂ ಹಾಕಲಾಗಿದೆ.
ಸೋಮೇಶ್ವರ ಪುರಸಭೆ ವ್ಯಾಪ್ತಿಯಲ್ಲಿರುವ ಕೆ.ಸಿ.ರೋಡಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕ ಪ್ಲಾಸ್ಟಿಕ್, ತ್ಯಾಜ್ಯ ರಾಶಿ ಕೊಳೆತು ನಾರುತ್ತಿತ್ತು. ಇಂಥ ಪರಿಸ್ಥಿತಿ ಹಲವು ಸಮಯಗಳಿಂದ ಇದ್ದು ಈ ಬಗ್ಗೆ ವಿಜಯವಾಣಿಯಲ್ಲಿ ನಿರಂತರ ವರದಿ ಪ್ರಕಟಿಸಲಾಗಿತ್ತು. ಪುರಸಭೆಯಿಂದ ತೆರವುಗೊಳಿಸಿದ ಮರುದಿನದಿಂದ ಮತ್ತೆ ತ್ಯಾಜ್ಯ ರಾಶಿಯಾಗುತ್ತಿತ್ತು.
ಈ ಜಾಗ ತಲಪಾಡಿ ಗ್ರಾಪಂ ಸನಿಹದಲ್ಲಿರುವ ಕಾರಣ ಸಾರ್ವಜನಿಕರು ತಲಪಾಡಿ ಪಂಚಾಯಿತಿ ಅಧಿಕಾರಿಗಳಿಗೆ ಕರೆ ಮಾಡುತ್ತಿದ್ದ ಪ್ರಸಂಗವೂ ನಡೆಯುತ್ತಿತ್ತು. ತಲಪಾಡಿ ಮತ್ತು ಸೋಮೇಶ್ವರದಲ್ಲಿ ಮನೆಗಳಿಂದ ಕಸ ಸಂಗ್ರಹ ನಡೆಯುತ್ತಿದ್ದರೂ ಗಡಿಭಾಗ ಕೆ.ಸಿ.ರೋಡ್ ನಲ್ಲಿ ಕೇರಳದಿಂದಲೇ ಹೆಚ್ಚಾಗಿ ಕಸ ಬಂದು ಬೀಳುತ್ತಿದ್ದ ಕಾರಣ ಪುರಸಭೆ ಅಧಿಕಾರಿಗಳು ಎಚ್ಚರಿಕೆಯ ಫಲಕ ಹಾಕಿದ್ದರೂ ಪ್ರಯೋಜನ ಆಗಿರಲಿಲ್ಲ.
ಜಾನುವಾರು, ಶ್ವಾನಗಳು ಪ್ಲಾಸ್ಟಿಕ್ ಜತೆ ಆಹಾರ ತಿನ್ನುವ ದೃಶ್ಯ ಸಾಮಾನ್ಯವಾಗಿತ್ತು. ಪ್ರತಿದಿನ ಸಾವಿರಾರು ಜನರು ಓಡಾಡುವ ಪ್ರದೇಶವಾಗಿದ್ದು ಪುರಸಭೆಯ ಮಾನ ಹರಾಜು ಹಾಕುತ್ತಿತ್ತು. ಈ ಬಗ್ಗೆ ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರಿಗೆ ಮಾಹಿತಿ ಬಂದಿದ್ದು ತಕ್ಷಣ ಅವರು ಪುರಸಭೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ಸ್ಥಳದಲ್ಲಿದ್ದ ತ್ಯಾಜ್ಯ ವಿಲೇವಾರಿ ಮಾಡಿಸಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿದ್ದಾರೆ.