More

  ಉಳ್ಳಾಲ ಅಧಿಕೃತ ಮಾರುಕಟ್ಟೆಗೆ ಕಂಟಕ!: ರಸ್ತೆಬದಿಯಲ್ಲೇ ಮೀನು ಮಾರಾಟ

  ಅನ್ಸಾರ್ ಇನೋಳಿ ಉಳ್ಳಾಲ

  ಉಳ್ಳಾಲ ವ್ಯಾಪ್ತಿಯ ಎಲ್ಲೆಂದರಲ್ಲಿ ರಸ್ತೆಬದಿ ಮೀನು ಮಾರಾಟ ಅಡೆತಡೆ ಇಲ್ಲದೆ ನಡೆಯುತ್ತಿದೆ, ಇದರ ಪರಿಣಾಮ ನೇರವಾಗಿ ನಗರಸಭೆಯ ಅಧಿಕೃತ ಮೀನು ಮಾರುಕಟ್ಟೆಗೆ ತಟ್ಟಿದೆ.

  ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ ಅಧಿಕೃತ ಮೀನು ಮಾರುಕಟ್ಟೆ ಉಳ್ಳಾಲ ಮತ್ತು ತೊಕ್ಕೊಟ್ಟು ಒಳಪೇಟೆಯಲ್ಲಿವೆ. ಉಳ್ಳಾಲ ಪೇಟೆ ನಗರಸಭೆಯ ಸನಿಹದಲ್ಲೇ ಇರುವ ಮೀನು ಮಾರುಕಟ್ಟೆ ಶಿಥಿಲಾವಸ್ಥೆಯಲ್ಲಿದೆ. ತೊಕ್ಕೊಟ್ಟು ಮಾರುಕಟ್ಟೆ ಈಗ ಹೊಸರೂಪ ಪಡೆದಿದೆ. ಉಳ್ಳಾಲ ಪೇಟೆಯ ಮಾರುಕಟ್ಟೆಗೆ 20 ವರ್ಷ. 2003-04ನೇ ಸಾಲಿನಲ್ಲಿ ಯು.ಟಿ.ಫರೀದ್ ಶಾಸಕರಾಗಿದ್ದು, ಅಂದಿನ ಸಂಸದ ಜನಾರ್ದನ ಪೂಜಾರಿಯವರ ಅನುದಾನದಲ್ಲಿ ಈ ಮಾರುಕಟ್ಟೆ ಕಟ್ಟಡ ನಿರ್ಮಿಸಲಾಗಿದೆ. ನಂತರದ ದಿನಗಳಲ್ಲಿ ಕಟ್ಟಡ ಅಭಿವೃದ್ಧಿ ಕಂಡಿಲ್ಲ. ಸಮುದ್ರದ ಸನಿಹದಲ್ಲೇ ಇರುವುದರಿಂದ ಮಾರುಕಟ್ಟೆ ಕಟ್ಟಡ ಸಹಿತ ಪಕ್ಕದಲ್ಲೇ ನಗರಸಭೆಗೆ ಸೇರಿದ ಎಂಟು ಸ್ಟಾಲ್‌ಗಳ ಸ್ಥಿತಿಯೂ ಶೋಚನೀಯವಾಗಿದೆ. ಈ ಕಟ್ಟಡದಿಂದ ನಗರಸಭೆಗೆ ಉತ್ತಮ ಆದಾಯ ಪಡೆಯುವ ಅವಕಾಶ ಇದೆ. ನಗರೋತ್ಥಾನ ನಾಲ್ಕನೇ ಹಂತದ ಅನುದಾನ ಮೀಸಲಿಟ್ಟು ಅಭಿವೃದ್ಧಿಪಡಿಸುವ ಬಗ್ಗೆ ಹಿಂದಿನ ಅಧ್ಯಕ್ಷೆ ಹೇಳಿದ್ದ ಮಾತಿಗೆ ವರ್ಷ ಕಳೆದರೂ ಪ್ರಯೋಜನ ಶೂನ್ಯ.

  ಇನ್ನು ತೊಕ್ಕೊಟ್ಟಿನಲ್ಲಿದ್ದ ಮಾರುಕಟ್ಟೆ ಕಟ್ಟಡಕ್ಕೆ 45 ವರ್ಷಗಳ ಇತಿಹಾಸವಿತ್ತು. ಆದರೆ ಅತ್ಯಂತ ಇಕ್ಕಟ್ಟು, ಶುಚಿತ್ವವಿಲ್ಲದ್ದ ಕಾರಣ ಉತ್ತಮ ಕಟ್ಟಡ ನಿರ್ಮಿಸಿ ಆದಾಯ ಪಡೆಯುವ ನಿಟ್ಟಿನಲ್ಲಿ 2020ರಲ್ಲೇ ಕಟ್ಟಡ ಕೆಡವಿ, ವರ್ಷ ಬಳಿಕ ಕಾಮಗಾರಿ ಪೂರ್ಣಗೊಳಿಸಲಾಗಿತ್ತು. ಫೆ.3ರಂದು ಒಂದು ಹಂತದ ಹರಾಜು ಪ್ರಕ್ರಿಯೆ ನಡೆದಿದೆ.

  ಬಾಕಿಯಾದ ಮಾರುಕಟ್ಟೆ!

  ಫೆ.3ರಂದು ಪ್ರತಿಪಕ್ಷ ವಿರೋಧದ ನಡುವೆಯೇ ಏಳು ಮಳಿಗೆಗಳ ಹರಾಜು ಪ್ರಕ್ರಿಯೆ ನಡೆಸಲಾಗಿದೆ. ಆದರೆ ಇಲ್ಲಿ ನಿರ್ಮಿಸಲಾಗಿರು ಮೀನು ಮಾರುಕಟ್ಟೆ ಯಾರಿಗೂ ಬೇಡವಾಗಿದೆ. 1,100 ಚದರ ಅಡಿಯ ಮೀನು ಮಾರುಕಟ್ಟೆಯಲ್ಲಿ ಹತ್ತು ಮಂದಿಗೆ ವ್ಯಾಪಾರ ಮಾಡಲು ಅವಕಾಶ ಇದೆ ಎಂದು ಹೇಳಲಾಗಿದ್ದರೂ ಅಲ್ಲಿರುವ ವ್ಯವಸ್ಥೆಗಳ ಬಗ್ಗೆ ಮಾಹಿತಿ ನೀಡಲಾಗಿಲ್ಲ. 25,705 ಬಾಡಿಗೆ ಮತ್ತು 12,51,250 ಠೇವಣಿ ನಿಗದಿಗೊಳಿಸಿದ್ದರೂ ಇನ್ನೂ ಮಳಿಗೆಯ ಹರಾಜು ಪ್ರಕ್ರಿಯೆ ನಡೆದಿಲ್ಲ.

  ಉಳ್ಳಾಲ ನಗರಸಭಾ ವ್ಯಾಪ್ತಿಯ ಕಲ್ಲಾಪು ರಾಷ್ಟ್ರೀಯ ಹೆದ್ದಾರಿಯಿಂದ ಹಿಡಿದು ಚೆಂಬುಗುಡ್ಡೆ, ಪಂಡಿತೌಸ್ ವರೆಗೂ ರಸ್ತೆಬದಿ ಮೀನು ಮಾರಾಟ ಭರಾಟೆ ಜೋರಾಗಿದೆ. ಅದಲ್ಲದೆ ನಗರಸಭೆಯ ಮಾರುಕಟ್ಟೆ ಸನಿಹದಲ್ಲೇ ಖಾಸಗಿ ಕಟ್ಟಡದಲ್ಲೂ ಮೀನು ವ್ಯಾಪಾರ ನಡೆಯುತ್ತಿದೆ. ಇದರಿಂದಾಗಿ ಹಿಂದೆಯೇ ನಗರಸಭೆಯ ಮೀನು ಮಾರುಕಟ್ಟೆ ಸೊರಗಿತ್ತು. ಆ ಸಂದರ್ಭ ಚಿಲ್ಲರೆ ಬಾಡಿಗೆ ಮಾತ್ರ ಇದ್ದರೂ ಪಾವತಿ ಅಷ್ಟಕಷ್ಟೇ ಇತ್ತು.

  ಆದರೆ ನೂತನ ಮಾರುಕಟ್ಟೆಗೆ ವಿಧಿಸಲಾಗಿರುವ ಠೇವಣಿ, ಆರಂಭಿಕ ಬಿಡ್ ದುಬಾರಿ ಎನಿಸಿದೆ ಎನ್ನುವ ಅಭಿಪ್ರಾಯ ಬಿಡ್ ದಾರರು ಮಾತ್ರವಲ್ಲದೆ ಜನಪ್ರತಿನಿಧಿಗಳಿಂದಲೂ ವ್ಯಕ್ತವಾಗಿದೆ. ಈ ಕಾರಣದಿಂದ ನೂತನ ಮೀನು ಮಾರುಕಟ್ಟೆ ನಿಷ್ಪ್ರಯೋಜಕ ಎನಿಸಿದೆ. ಠೇವಣಿ ಮತ್ತು ಬಾಡಿಗೆ ದರ ಕಡಿಮೆ ಮಾಡಿ ಬಳಿಕ ಹರಾಜು ಕರೆಯಬೇಕಿದೆ. ಅದಕ್ಕಿಂತ ಮೊದಲು ರಸ್ತೆಬದಿ ವ್ಯಾಪಾರಕ್ಕೆ ತಡೆ ಹೇರುವ ಅವಶ್ಯಕತೆಯೂ ಇದೆ. ಇಲ್ಲದಿದ್ದಲ್ಲಿ ನೂತನ ಮಾರುಕಟ್ಟೆ ಪಾಳುಬಿದ್ದು ಸರ್ಕಾರದ ಹಣ ನೀರು ಪಾಲಾಗಲಿದೆ.

  ಮೀನು ಮಾರುಕಟ್ಟೆ ಹಾಗೂ ಏಳು ಮಳಿಗೆಗಳ ಹರಾಜು ಬಾಕಿಯಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿ ಅವರಿಂದ ಬರುವ ಸೂಚನೆ ಆಧರಿಸಿ ಮರು ಹರಾಜು ಹಾಕುವ ವ್ಯವಸ್ಥೆ ಮಾಡಲಾಗುವುದು.

  -ವಾಣಿ ವಿ.ಆಳ್ವ ಪೌರಾಯುಕ್ತೆ, ಉಳ್ಳಾಲ ನಗರಸಭೆ

  ಮೊದಲ ಹಂತದ ಹರಾಜು ಪ್ರಕ್ರಿಯೆ ಸರ್ಕಾರದ ನಿಯಮದಂತೆ ನಡೆದಿದೆ, ಮೀನು ಮಾರುಕಟ್ಟೆಗೆ ದುಬಾರಿ ಬಾಡಿಗೆ ಮತ್ತು ಠೇವಣಿ ಇದೆ ಎನ್ನುವ ಕಾರಣಕ್ಕೆ ಹರಾಜಿನಲ್ಲಿ ಯಾರೂ ಭಾಗವಹಿಸುತ್ತಿಲ್ಲ. ಮುಂದೆ ಜಿಲ್ಲಾಧಿಕಾರಿ ಸೂಚನೆಯಂತೆ ಪೌರಾಯುಕ್ತರು ಕ್ರಮ ಕೈಗೊಳ್ಳಲಿದ್ದಾರೆ.

  -ಅಬ್ದುಲ್ ಅಜೀಜ್, ನಗರಸಭಾ ಸದಸ್ಯ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts