

ಬೆಂಗಳೂರು : ಹಿಂದು ಧರ್ಮಗ್ರಂಥಗಳ ಬಗ್ಗೆ ವಿಕಲ್ಪ ಹಾಗೂ ನಕಾರಾತ್ಮಕ ಹಬ್ಬಿಸುವಂತಹ ಪ್ರಶ್ನೆ ಕೇಳಿ ಹಿಂದುಗಳ ಶ್ರದ್ಧಾಸ್ಥಾನವನ್ನು ಅವಮಾನಿಸಿರುವ ಕೌನ್ ಬನೇಗಾ ಕರೋಡಪತಿ (ಕೆಬಿಸಿ) ಕಾರ್ಯಕ್ರಮದವರು ಹಾಗೂ ನಿರೂಪಕ ಅಮಿತಾಬ್ ಬಚ್ಚನ್ ಬಹಿರಂಗ ಕ್ಷಮೆ ಕೇಳಬೇಕು ಎಂದು ಹಿಂದು ಜನಜಾಗೃತಿ ಸಮಿತಿ ಆಗ್ರಹಿಸಿದೆ.
ಅ.30ರಂದು ಖಾಸಗಿ ಚಾನೆಲ್‌ನಲ್ಲಿ ಕೆಬಿಸಿ ಕಾರ್ಯಕ್ರಮದಲ್ಲಿ ಭಿತ್ತರವಾದ ಕರ್ಮವೀರ್ ವಿಶೇಷ ಭಾಗದಲ್ಲಿ ಹಿಂದು ಧರ್ಮ ಗ್ರಂಥಗಳ ಬಗ್ಗೆ ವಿವಾದಾತ್ಮಕ ಪ್ರಶ್ನೆ ಕೇಳಲಾಯಿತು. 1927 ಡಿ.27ರಂದು ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಅವರ ಅನುಯಾಯಿಗಳು ಯಾವ ಧರ್ಮಗ್ರಂಥವನ್ನು ಸುಟ್ಟರು? ಎಂಬ ಪ್ರಶ್ನೆ ಕೇಳಿದ ಬಚ್ಚನ್, ಅದಕ್ಕೆ ಆಯ್ಕೆ ಎಂದು ವಿಷ್ಣುಪುರಾಣ, ಭಗವದ್ಗೀತೆ, ಋಗ್ವೇದ ಹಾಗೂ ಮನುಸ್ಮೃತಿ ಎಂಬ ಉತ್ತರಗಳನ್ನು ನೀಡಿದ್ದರು. ಈ ಪ್ರಶ್ನೆಯಿಂದ ಬಚ್ಚನ್ ಹಾಗೂ ಕೆಸಿಬಿಯವರು ಯಾವ ಸಂದೇಶವನ್ನು ನೀಡಲು ಬಯಸಿದ್ದಾರೆ? ಜಾತಿ ತಾರತಮ್ಯ ಹಾಗೂ ಅಸ್ಪೃಶ್ಯತೆಯನ್ನು ವೈಚಾರಿಕ ದೃಷ್ಟಿಯಿಂದ ಅಯೋಗ್ಯವೆಂದು ನಿರ್ಧರಿಸಲು ಮನುಸ್ಮೃತಿಯನ್ನು ಟೀಕಿಸಿದರು ಹಾಗೂ ಅದನ್ನು ಸುಟ್ಟರು ಎಂದು ಹೇಳಿದ ಬಚ್ಚನ್ ಈ ಮೂಲಕ ಸಮಾಜದ ದಾರಿತಪ್ಪಿಸಲು ಪ್ರಯತ್ನಿಸಿದ್ದಾರೆ ಎಂದು ಸಮಿತಿ ಹೇಳಿದೆ.
ಕೆಸಿಬಿಯು ಹಿಂದಿನ ವರ್ಷವೂ ಛತ್ರಪತಿ ಶಿವಾಜಿ ಮಹಾರಾಜರನ್ನು ಏಕವಚನದಲ್ಲಿ ಉಲ್ಲೇಖಿಸುತ್ತಾ ಹಿಂದು ರಾಷ್ಟ್ರ ಪುರುಷರನ್ನು ಅವಮಾನಿಸಿತ್ತು. ಹಿಂದೂ ಧರ್ಮ, ಧರ್ಮಗ್ರಂಥಗಳು ಮತ್ತು ರಾಷ್ಟ್ರ ಪುರುಷರನ್ನು ಪದೇಪದೆ ಉದ್ದೇಶಪೂರ್ವಕವಾಗಿ ಅವಮಾನಿಸಿದ ಕೆಬಿಸಿ ಮತ್ತು ಖಾಸಗಿ ವಾಹಿನಿಯನ್ನು ನಿಷೇಧಿಸಬೇಕು ಮತ್ತು ಸಂಸ್ಕೃತಿಯ ರಕ್ಷಣೆಗೆ ಮುಂದಾಗಬೇಕು ಎಂದು ಸಮಿತಿಯ ರಾಷ್ಟ್ರೀಯ ವಕ್ತಾರರಾದ ರಮೇಶ ಶಿಂದೆ ಒತ್ತಾಯಿಸಿದ್ದಾರೆ.