More

    ಗಿಲ್ಗಿಟ್-ಬಾಲ್ಟಿಸ್ತಾನಕ್ಕೆ ಪ್ರಾಂತೀಯ ಸ್ಥಾನಮಾನ; ಭಾರತ ಆಕ್ರೋಶ..

    ಇಸ್ಲಾಮಾಬಾದ್: ಪಾಕ್ ಆಕ್ರಮಿತ ಕಾಶ್ಮೀರ ವ್ಯಾಪ್ತಿಯಲ್ಲಿರುವ ಗಿಲ್ಗಿಟ್-ಬಾಲ್ಟಿಸ್ತಾನಕ್ಕೆ ತಾತ್ಕಾಲಿಕ ಪ್ರಾಂತೀಯ ಸ್ಥಾನಮಾನ ನೀಡುತ್ತಿರುವುದಾಗಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಘೋಷಿಸಿದ್ದಾರೆ. ಈ ನಿರ್ಧಾರಕ್ಕೆ ಪಾಕಿಸ್ತಾನದಲ್ಲೇ ವಿರೋಧ ವ್ಯಕ್ತವಾಗುತ್ತಿದ್ದು, ಹಲವೆಡೆ ಪ್ರತಿಭಟನೆಗಳೂ ನಡೆದಿವೆ. ಈ ಪ್ರದೇಶಕ್ಕೆ ಪೂರ್ಣ ಪ್ರಾಂತ್ಯದ ಸ್ಥಾನಮಾನ ನೀಡಿ, ಅದನ್ನು ಏಕಪಕ್ಷೀಯವಾಗಿ ಪಾಕಿಸ್ತಾನದಲ್ಲಿ ವಿಲೀನಗೊಳಿಸಲಾಗುತ್ತಿದೆ ಎಂದು ಭಾರತ ತೀವ್ರ ವಿರೋಧ ವ್ಯಕ್ತಪಡಿಸಿದೆ.

    ಗಿಲ್ಗಿಟ್-ಬಾಲ್ಟಿಸ್ತಾನಕ್ಕೆ ಭೇಟಿ ನೀಡಿದ್ದ ವೇಳೆ ಈ ಕುರಿತು ಇಮ್ರಾನ್ ಖಾನ್ ಅಧಿಕೃತ ಹೇಳಿಕೆ ನೀಡಿದ್ದಾರೆ. ‘ಗಿಲ್ಗಿಟ್- ಬಾಲ್ಟಿಸ್ತಾನಕ್ಕೆ ತಾತ್ಕಾಲಿಕ ಪ್ರಾಂತೀಯ ಸ್ಥಾನಮಾನ ನೀಡುವ ಬಗ್ಗೆ ಘೋಷಣೆ ಹೊರಡಿಸಲು ಇಲ್ಲಿಗೆ ಬಂದಿದ್ದೇನೆ. ಪ್ರಾಂತ್ಯದ ಎಲ್ಲ ಹಕ್ಕುಗಳನ್ನು ನೀಡಲಾಗುತ್ತದೆ. ನವೆಂಬರ್​ನಲ್ಲಿ ಚುನಾವಣೆ ನಡೆಯಲಿದೆ’ ಎಂದು ಹೇಳಿದ್ದಾರೆ.

    ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಮತ್ತು ಗಿಲ್ಗಿಟ್-ಬಾಲ್ಟಿಸ್ತಾನವನ್ನು ಪಾಕಿಸ್ತಾನದ ನಕ್ಷೆಯಿಂದ ಸೌದಿ ಅರೇಬಿಯಾ ತೆಗೆದುಹಾಕಿರುವ ನಡುವೆ ಈ ಬೆಳವಣಿಗೆ ನಡೆಯುತ್ತಿದೆ. ಗಿಲ್ಗಿಟ್- ಬಾಲ್ಟಿಸ್ತಾನ್ ವಿಚಾರದಲ್ಲಿ ಇಮ್ರಾನ್ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆಗಳು ನಡೆಯುತ್ತಿದ್ದರೂ ಸಹ ಚೀನಾದಿಂದ ಹೆಚ್ಚುತ್ತಿರುವ ಒತ್ತಡದಿಂದಾಗಿ ಇಮ್ರಾನ್ ಈ ನಿರ್ಧಾರ ಘೋಷಿಸಿದ್ದಾರೆ ಎನ್ನಲಾಗಿದೆ. ಪಾಕ್ ಸರ್ಕಾರದ ನಿರ್ಧಾರಕ್ಕೆ ಭಾರತ ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಿದೆ. ಪಿಒಕೆಯ ಭಾಗವಾಗಿರುವ ಗಿಲ್ಗಿಟ್- ಬಾಲ್ಟಿಸ್ತಾನ ಕೂಡ ತನ್ನ ಭಾಗ ಎಂದು ಭಾರತ ಪರಿಗಣಿಸುತ್ತದೆ.

    ಸ್ವಾಯತ್ತ ಪ್ರದೇಶ: ಗಿಲ್ಗಿಟ್-ಬಾಲ್ಟಿಸ್ತಾನವನ್ನು ಸ್ವಾಯತ್ತ ಪ್ರದೇಶ ಎಂದು ಗುರುತಿಸಲಾಗಿದೆ. ಆದರೆ ಪಾಕಿಸ್ತಾನ ಸರ್ಕಾರ, ಅಲ್ಲಿ ತಾತ್ಕಾಲಿಕ ಸುಗ್ರೀವಾಜ್ಞೆಗಳ ಮೂಲಕ ಆಡಳಿತ ನಡೆಸುತ್ತಿದೆ. 2009ರಲ್ಲಿ, ಉತ್ತರದ ಪ್ರದೇಶಗಳು ಎನ್ನಲಾಗುತ್ತಿದ್ದ ಈ ಪ್ರದೇಶವನ್ನು ಗಿಲ್ಗಿಟ್-ಬಾಲ್ಟಿಸ್ತಾನ ಎಂದು ಹೆಸರಿಸಿ ಸೀಮಿತ ಸ್ವಾಯತ್ತೆ ನೀಡುವ ಆದೇಶಕ್ಕೆ ಅಂದಿನ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಸಹಿ ಮಾಡಿದ್ದರು.

    ಭಾರತ ಆಕ್ರೋಶ

    ಗಿಲ್ಗಿಟ್-ಬಾಲ್ಟಿಸ್ತಾನಕ್ಕೆ ಅಕ್ರಮವಾಗಿ ಪ್ರಾಂತೀಯ ಸ್ಥಾನಮಾನ ನೀಡುವ ಪಾಕಿಸ್ತಾನದ ಕ್ರಮವನ್ನು ದೃಢವಾಗಿ ತಿರಸ್ಕರಿಸುತ್ತೇವೆ ಎಂದು ಭಾರತ ಹೇಳಿದೆ. ಗಿಲ್ಗಿಟ್-ಬಾಲ್ಟಿಸ್ತಾನವನ್ನು ಒಳಗೊಂಡಂತೆ ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಭಾರತದ ಅವಿಭಾಜ್ಯ ಅಂಗ. ಪಾಕಿಸ್ತಾನ ಈ ಪ್ರದೇಶಗಳ ಮೇಲೆ ಯಾವುದೇ ಹಕ್ಕು ಹೊಂದಿಲ್ಲ ಎಂದು ವಿದೇಶಾಂಗ ಸಚಿವಾಲಯ ಹೇಳಿದ್ದಾರೆ.

    ಯಾಕೆ ಮಹತ್ವದ್ದು?

    ಭಾರತ, ಪಾಕಿಸ್ತಾನ ಮತ್ತು ಚೀನಾ ಗಡಿಗಳ ಸಂಗಮ ಸ್ಥಾನದಲ್ಲಿರುವ ಗಿಲ್ಗಿಟ್-ಬಾಲ್ಟಿಸ್ತಾನ್, ಏಷ್ಯಾದ ಅತ್ಯಂತ ಮಹತ್ವದ ವ್ಯೂಹಾತ್ಮಕ ಪ್ರದೇಶವಾಗಿದೆ. ಮಧ್ಯ ಏಷ್ಯಾ, ನೈಋತ್ಯ ಏಷ್ಯಾ ಮತ್ತು ದಕ್ಷಿಣ ಏಷ್ಯಾ ಸಹಿತ ನಾನಾ ಭಾಗಗಳನ್ನು ಸಂರ್ಪಸುವ ಪ್ರದೇಶವೂ ಇದಾಗಿದೆ. ಕೆಲವು ಮಧ್ಯಪ್ರಾಚ್ಯ ದೇಶಗಳು ಮತ್ತು ರಷ್ಯಾ ಕೂಡ ಇಲ್ಲಿಂದ ಅನತಿ ದೂರದಲ್ಲಿವೆ. ಚೀನಾದ ವಿಸ್ತರಣಾವಾದ ಯೋಜನೆಗೆ ಇದು ಪ್ರಶಸ್ತವಾದ ಸ್ಥಳವಾಗಿದೆ. ಏಷ್ಯಾದಲ್ಲಿ ಭೌಗೋಳಿಕ-ರಾಜಕೀಯ ನಿಯಂತ್ರಣ ಸಾಧಿಸಲು ಇದು ಮಹತ್ವದ ವ್ಯೂಹಾತ್ಮಕ ಕೇಂದ್ರವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts