ಕಾವೇರಿ ಒತ್ತುವರಿ ತೆರವು ಶುರು: ಪ್ರವಾಹ ಪ್ರಮಾಣ ದುಪ್ಪಟ್ಟಾಗುವ ಅಪಾಯ

kaveri encroachment
Published on

| ಸಿ.ಕೆ. ಮಹೇಂದ್ರ ಮೈಸೂರು

ಹವಾಮಾನ ವೈಪರೀತ್ಯಕ್ಕೆ ಅನುಗುಣವಾಗಿ ಬದಲಾಗುತ್ತಿರುವ ಪ್ರವಾಹ ಪರಿಸ್ಥಿತಿಗೆ ತಕ್ಕಂತೆ ಕಾವೇರಿ ಕಣಿವೆಯನ್ನು ಸಜ್ಜುಗೊಳಿಸುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಇದರಿಂದಾಗಿ ಕೆಆರ್​ಎಸ್ ಅಣೆಕಟ್ಟೆಯ ಕೆಳ ಭಾಗದ ಬಹಳಷ್ಟು ಜನವಸತಿ ಪ್ರದೇಶಗಳು ಹಾಗೂ ನದಿ ಪಾತ್ರದಲ್ಲಿ ಒತ್ತುವರಿಯಾಗಿರುವ ಲಕ್ಷಾಂತರ ಎಕರೆ ಭೂಮಿ ತೆರವುಗೊಳಿಸಬೇಕಾಗುತ್ತದೆ. ಈ ಯೋಜನೆ ಜಾರಿಯಿಂದ ಆಸ್ತಿ ನಷ್ಟ ಹಾಗೂ ಜೀವಹಾನಿ ತಪ್ಪಿಸಬಹುದಾಗಿದೆ.

ದುರಸ್ತಿ ನಂತರವೂ ಜಲಾಶಯದಿಂದ ಗರಿಷ್ಠ 3.5 ಲಕ್ಷ ಕ್ಯೂಸೆಕ್ ನೀರು ಹೊರಬಿಡಲು ಸಾಧ್ಯವಾಗುತ್ತದೆ. ಆದ್ದರಿಂದ 6 ಲಕ್ಷ ಕ್ಯೂಸೆಕ್​ಗೂ ಹೆಚ್ಚಿನ ನೀರನ್ನು ಹೊರಬಿಡುವ ಅಂದಾಜು ಮಾಡುವುದು ಸರಿಯಲ್ಲ ಎಂಬುದು ಕಾವೇರಿ ನೀರಾವರಿ ನಿಗಮದ ವಾದ. ಹೀಗಾಗಿ, ಗರಿಷ್ಠ ಪ್ರಮಾಣದ ನೀರಿನ ಪ್ರಮಾಣದ ಅಂದಾಜನ್ನು ಮರುಪರಿಶೀಲಿಸಲು ಕೋರಿದೆ. ನದಿ ಪಾತ್ರದಲ್ಲಿ ಗರಿಷ್ಠ ಪ್ರವಾಹದ ಗಡಿ ಗುರುತಿಸುವಿಕೆಯಿಂದ ಆ ಪ್ರದೇಶದಲ್ಲಿ ಈಗಾಗಲೇ ವಾಸ ಮಾಡುತ್ತಿರುವ ಜನರು ಹಾಗೂ ಆಸ್ತಿ-ಪಾಸ್ತಿ ತೆರವುಗೊಳಿಸಬೇಕಾಗುತ್ತದೆ. ಆದರೆ ಗರಿಷ್ಠ ಪ್ರವಾಹದ ಅಂದಾಜು ಪರಿಷ್ಕರಣೆಯಾದರೆ ತೆರವು ಪ್ರಮಾಣ ಕಡಿಮೆಯಾಗಲಿದೆ. ಪರಿಷ್ಕೃತ ಪ್ರಮಾಣದಷ್ಟು ಪ್ರವಾಹದ ಅಂದಾಜನ್ನು ಇಟ್ಟುಕೊಂಡರೂ ತಗ್ಗು ಪ್ರದೇಶ ಅಪಾಯದಲ್ಲೇ ಇದೆ.

ಉತ್ತರಾಖಂಡ ರಾಜ್ಯದಲ್ಲಿ ಸಂಭವಿಸಿದ ಭಾರಿ ಹಿಮಪ್ರವಾಹಕ್ಕೆ ಜನಜೀವನ ತತ್ತರಿಸಿದ್ದಲ್ಲದೆ, ಜಲವಿದ್ಯುತ್ ಸ್ಥಾವರಗಳೂ ಕೊಚ್ಚಿಹೋಗಿದ್ದವು. ಪ್ರವಾಹದ ದಿಢೀರ್ ಹೆಚ್ಚಳವೇ ಇದಕ್ಕೆ ಕಾರಣವಾಗಿತ್ತು. ಇಂತಹ ಘಟನೆಗಳು ಮರುಕಳಿಸದಂತೆ ಎಲ್ಲ ಕಡೆಗಳಲ್ಲೂ ಎಚ್ಚರ ವಹಿಸಲು ಮುಂದಾಗಿರುವ ಕೇಂದ್ರ ಜಲ ಆಯೋಗ, ಮುನ್ನೆಚ್ಚರಿಕೆ ಕ್ರಮವಾಗಿ ಕಾವೇರಿ ಕೊಳ್ಳದ ಜಲಾಶಯಗಳ ನೀರು ಸಂಗ್ರಹ ಸಾಮರ್ಥ್ಯ, ಜಲಾಶಯಗಳ ಕೆಳಭಾಗದಲ್ಲಿ ನದಿ ತೀರಗಳ ನಿರ್ವಹಣೆ ಮರು ಪರಿಶೀಲಿಸುವ ಕಾರ್ಯಕ್ಕೆ ಮುಂದಾಗಿದೆ. ಈಗಾಗಲೇ ಈ ಕಾರ್ಯಕ್ಕೆ ಅನುಮತಿ ದೊರೆತಿದ್ದು, ಪ್ರವಾಹದ ಅಂದಾಜು ಸಮೀಕ್ಷೆ ನಡೆಸಿ ಪಟ್ಟಿಯನ್ನು ಸಿದ್ಧಗೊಳಿಸಲಾಗಿದೆ.

ಎಲ್ಲಿಂದ ನೀರು ಬರುತ್ತೆ?: ಜೀವನದಿ ಕಾವೇರಿಗೆ ಹಲವಾರು ಉಪನದಿಗಳಿವೆ. ಅವುಗಳಲ್ಲಿ ಕಪಿಲಾ ನದಿ ಕೆಆರ್​ಎಸ್ ಜಲಾಶಯದ ನಂತರ ಕಾವೇರಿಯನ್ನು ಸೇರುತ್ತದೆ. ಉಳಿದಂತೆ ಯಗಚಿ, ಹೇಮಾವತಿ, ಲಕ್ಷ್ಮಣತೀರ್ಥ ನದಿಗಳು ಕೆಆರ್​ಎಸ್​ಗೂ ಮುನ್ನ ಕಾವೇರಿ ಒಡಲಿನಲ್ಲಿ ಲೀನವಾಗುತ್ತವೆ. ಇದರ ಜತೆಗೆ ವಾಟೆಹೊಳೆ, ಚಿಕ್ಲಿಹೊಳೆಯಂತಹ ಸಣ್ಣ ಪ್ರಮಾಣದ ಅಣೆಕಟ್ಟೆಗಳ ನೀರನ್ನೂ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಮಳೆಗಾಲದ ಪೂರ್ಣ ದಿನಗಳಲ್ಲಿ ಸಮಪ್ರಮಾಣದಲ್ಲಿ ಮಳೆ ಸುರಿಯುವ ಬದಲು ಹವಾಮಾನ ಬದಲಾವಣೆ ಕಾರಣಕ್ಕಾಗಿ ಏಕಕಾಲದಲ್ಲಿ ಅತಿವೃಷ್ಟಿಯಾಗುತ್ತಿದೆ. ಕೊಡಗಿನ ಬ್ರಹ್ಮಗಿರಿ ಸೇರಿ ಪಶ್ಚಿಮಘಟ್ಟದಲ್ಲಿ ಅರಣ್ಯನಾಶದ ಪರಿಣಾಮವಾಗಿ ಬಿದ್ದ ಮಳೆ ನೀರೆಲ್ಲ ಒಂದೇ ಬಾರಿಗೆ ನದಿಯಲ್ಲಿ ಹರಿದು ಮಲೆನಾಡು ಹಾಗೂ ಬಯಲು ಸೀಮೆಯಲ್ಲಿ ಪ್ರವಾಹ ಸೃಷ್ಟಿಸುತ್ತಿದೆ. ವರ್ಷಾಂತರಗಳಲ್ಲಿ ನಡೆದಿರುವ ಈ ಬದಲಾವಣೆ ಪ್ರಕ್ರಿಯೆಯನ್ನು ಒಂದೆರಡು ವರ್ಷಗಳಲ್ಲಿ ಸರಿಪಡಿಸಲು ಸಾಧ್ಯವಿಲ್ಲದೆ ಇರುವ ಕಾರಣದಿಂದ ಪ್ರವಾಹದಿಂದ ರಕ್ಷಿಸಿಕೊಳ್ಳುವ ಮುನ್ನೆಚ್ಚರಿಕೆಯೊಂದೇ ನಮ್ಮ ಮುಂದಿರುವ ದಾರಿಯಾಗಿದೆ.

ತಗ್ಗು ಪ್ರದೇಶ ಒತ್ತುವರಿ: ಕಾವೇರಿ ನದಿಯ ಜಲಾಶಯಗಳ ತಗ್ಗು ಪ್ರದೇಶ ಒತ್ತುವರಿಯಾಗಿದೆ ಎಂಬ ಆರೋಪಗಳು ಹಲವು ವರ್ಷಗಳಿಂದ ಕೇಳಿಬರುತ್ತಲೇ ಇವೆ. ಇದರಿಂದಾಗಿ ಅಪಾಯ ಹೆಚ್ಚಾಗುವ ಸಾಧ್ಯತೆಗಳೂ ಇವೆ. ಇದರ ನಿಖರವಾದ ಅಂದಾಜು ಈವರೆಗೆ ಆಗಿರಲಿಲ್ಲ. ಈಗ ಗರಿಷ್ಠ ಪ್ರವಾಹದ ನೀರು ಬಂದರೆ ಎಲ್ಲಿಯವರೆಗೆ ಅಪಾಯ ಸಂಭವಿಸಲಿದೆ ಎಂಬುದನ್ನು ಗುರುತಿಸಲಾಗುತ್ತದೆ. ಅಂತಹ ಪ್ರದೇಶಗಳಲ್ಲಿ ಅಪಾಯ ಸೂಚಿಸುವ ದೊಡ್ಡ ದೊಡ್ಡ ಬೋರ್ಡ್ ಅಳವಡಿಸ ಲಾಗುತ್ತದೆ. ಪ್ರವಾಹ ಬಂದಾಗ ರಕ್ಷಿಸಿಕೊಳ್ಳಲು ಏನು ಮಾಡಬೇಕು, ಎಲ್ಲಿಗೆ ಹೋಗಬೇಕು ಎಂಬೆಲ್ಲ ಮಾರ್ಗಸೂಚಿ ಅಳವಡಿಸಲಾಗುತ್ತದೆ.

2.36 ಲಕ್ಷ ಕ್ಯೂಸೆಕ್ ನೀರು: ಈವರೆಗೆ ಕೆಆರ್​ಎಸ್​ನಿಂದ 1962ರಲ್ಲಿ ಅತಿ ಹೆಚ್ಚು ಅಂದರೆ 2.36 ಲಕ್ಷ ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗಿದೆ. 2018ರಲ್ಲಿ 1.60 ಲಕ್ಷ ಕ್ಯೂಸೆಕ್ ನೀರನ್ನು ಬಿಡಲಾಗಿತ್ತು. ಈಗ ಜಲಾಶಯವನ್ನು ದುರಸ್ತಿ ಮಾಡಲಾಗುತ್ತಿದ್ದು, 3.5 ಲಕ್ಷ ಕ್ಯೂಸೆಕ್​ಗೂ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹೊರಬಿಡಬಹುದಾಗಿದೆ. ಪ್ರವಾಹ ಹೆಚ್ಚಾಗುವ ಮುನ್ಸೂಚನೆ ಕಂಡುಬಂದರೆ 6 ಲಕ್ಷ ಕ್ಯೂಸೆಕ್​ಗೂ ಹೆಚ್ಚಾಗಬಹುದು. ಅತಿವೃಷ್ಟಿಯಿಂದ ಪ್ರವಾಹ ಉಂಟಾದರೆ ಹೇಮಾವತಿ, ಲಕ್ಷ್ಮಣತೀರ್ಥ ನದಿಗಳ ನೀರು ಅಲ್ಲಿಂದ ಬರಲು ಕನಿಷ್ಠ 24 ಗಂಟೆ ತೆಗೆದುಕೊಳ್ಳುತ್ತದೆ. ಅಷ್ಟರಲ್ಲಿ ಕೆಆರ್​ಎಸ್​ನಲ್ಲಿ ಮುನ್ನೆಚ್ಚರಿಕೆ ಕೈಗೊಳ್ಳಬೇಕಾಗುತ್ತದೆ.

ದುರಸ್ತಿ ನಂತರ 3.5 ಲಕ್ಷ ಕ್ಯೂಸೆಕ್ ನೀರನ್ನು ಹೊರಬಿಡಲು ಮಾತ್ರ ಸಾಧ್ಯವಾಗುತ್ತದೆ. ಈವರೆಗೆ ಅಷ್ಟು ಪ್ರಮಾಣದ ಪ್ರವಾಹ ಬಂದ ಉದಾಹರಣೆಗಳು ಇಲ್ಲ. ಹಾಗಾಗಿ, 6 ಲಕ್ಷಕ್ಕೂ ಹೆಚ್ಚಿನ ಪ್ರಮಾಣದ ಪ್ರವಾಹದ ಅಂದಾಜನ್ನು ಮರು ಪರಿಶೀಲಿಸುವಂತೆ ಮನವಿ ಮಾಡಲಾಗಿದೆ. ಪರಿಷ್ಕೃತ ಆದೇಶದ ನಂತರ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.

| ಕೆ.ಜಿ.ವಿಜಯಕುಮಾರ್ ಅಧೀಕ್ಷಕ ಇಂಜಿನಿಯರ್, ಕಾವೇರಿ ನೀರಾವರಿ ನಿಗಮ, ಕೆಆರ್​ಎಸ್ ವಿಭಾಗ

ಜಲಾಶಯದ ತಗ್ಗು ಪ್ರದೇಶದಲ್ಲಿ ಒತ್ತುವರಿಯಾಗಿರುವ ಬಗ್ಗೆ ಆರೋಪಗಳಿವೆ. ನದಿ ಪಾತ್ರದಲ್ಲಿ ಹಿಡುವಳಿ ಭೂಮಿಯೂ ಇದ್ದು, ಆ ಬಗ್ಗೆ ಯಾವುದೇ ಸೂಚನೆಗಳು ಇಲ್ಲ. ನದಿ ಪಾತ್ರವನ್ನು ರಕ್ಷಿಸುವ ವಿಷಯದಲ್ಲಿ ಸರ್ಕಾರದಿಂದ ಯಾವುದೇ ಸೂಚನೆ ಬಂದರೆ ಕ್ರಮ ಕೈಗೊಳ್ಳಲಾಗುವುದು.

| ಎಂ.ಸಿ. ರೂಪ ಶ್ರೀರಂಗಪಟ್ಟಣ ತಹಸೀಲ್ದಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net