ಮುಡಾ ಪ್ರಕರಣ: ಸಿಎಂ ಸಿದ್ದು ಪತ್ನಿಗೆ ಬಿಗ್​ ರಿಲೀಫ್​ ಕೊಟ್ಟ ಹೈಕೋರ್ಟ್​, ಇಡಿ ಸಮನ್ಸ್​ ರದ್ದು! Muda Case

Muda Case
Published on

Muda Case : ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಸಿದ್ದರಾಮಯ್ಯ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ನೀಡಿದ್ದ ಸಮನ್ಸ್ ಅನ್ನು ಕರ್ನಾಟಕ ಹೈಕೊರ್ಟ್​ ಇಂದು (ಮಾರ್ಚ್​ 07) ರದ್ದು ಮಾಡಿದೆ.

ಇದೇ ಪ್ರಕರಣದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್​ ಅವರಿಗೂ ಇಡಿ ಸಮನ್ಸ್​ ನೀಡಿತ್ತು. ಆದರೆ, ಹೈಕೋರ್ಟ್​ ಸಮನ್ಸ್​ ರದ್ದು ಮಾಡುವ ಮೂಲಕ ಇಬ್ಬರಿಗೂ ಬಿಗ್​ ರಿಲೀಫ್​ ನೀಡಿದೆ. ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಹೈಕೋರ್ಟ್​ ಪೀಠ ಈ ಆದೇಶ ಹೊರಡಿಸಿದೆ.

ಇದಕ್ಕೂ ಮುಂಚೆ ಅಂದರೆ, ಜನವರಿ 27 ರಂದು ನ್ಯಾಯಾಲಯವು ಪಾರ್ವತಿ ಮತ್ತು ಸುರೇಶ್ ಇಬ್ಬರಿಗೂ ನೀಡಲಾದ ಸಮನ್ಸ್‌ಗೆ ತಡೆ ನೀಡಿತ್ತು. ಇದೀಗ ರದ್ದುಗೊಳಿಸಿದೆ. ಇಡಿ ಸಮನ್ಸ್ ಪ್ರಶ್ನಿಸಿ ಪಾರ್ವತಿ ಮತ್ತು ಸುರೇಶ್ ಸಲ್ಲಿಸಿದ್ದ ಅರ್ಜಿಗಳ ಮೇರೆಗೆ ಈ ಆದೇಶವನ್ನು ನೀಡಲಾಗಿದೆ.

ಪಾರ್ವತಿ ಪರ ವಾದ ಮಂಡಿಸಿದ ಹಿರಿಯ ವಕೀಲ ಸಂದೇಶ್ ಚೌಟ, ಮುಡಾದಿಂದ ಭೂ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ಲೋಕಾಯುಕ್ತ ಪೊಲೀಸರು ಮತ್ತು ವಿಶೇಷ ತನಿಖಾ ತಂಡ ಈಗಾಗಲೇ ನಡೆಸಿದೆ. ಆದರೆ, ಜಾರಿ ನಿರ್ದೇಶನಾಲಯವು ಸಮಾನಾಂತರ ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಪ್ರಯತ್ನಿಸುತ್ತಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಜಾರಿ ನಿರ್ದೇಶನಾಲಯದ ಪರವಾಗಿ ಹಾಜರಾದ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್, ಪಾರ್ವತಿ ಅವರು ಪೂರ್ವಭಾವಿ ಅಪರಾಧದಲ್ಲಿ (ಅಕ್ರಮ ಭೂ ಮಂಜೂರಾತಿ) ಎರಡನೇ ಆರೋಪಿಯಾಗಿದ್ದು, ಅಪರಾಧದ ಲಾಭ ಪಡೆದಿರುವುದರಿಂದ ಅವರಿಗೆ ಸಮನ್ಸ್ ಜಾರಿ ಮಾಡಲಾಗುತ್ತಿದೆ ಎಂದು ವಾದಿಸಿದರು.

ಸಚಿವ ಸುರೇಶ್ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ.ವಿ. ನಾಗೇಶ್, ರಾಜ್ಯ ಸಚಿವರನ್ನು ಪೂರ್ವಭಾವಿ ಅಪರಾಧದಲ್ಲಿ ಆರೋಪಿಯನ್ನಾಗಿ ಹೆಸರಿಸದ ಕಾರಣ ಅವರಿಗೆ ಜಾರಿ ಮಾಡಲಾದ ಸಮನ್ಸ್ ರದ್ದುಗೊಳಿಸಬೇಕು ಎಂದು ವಾದಿಸಿದರು. ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ ಸಮನ್ಸ್​ ರದ್ದು ಮಾಡಿ ಆದೇಶ ಹೊರಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net