

ಬೆಂಗಳೂರು: ಹಾಸನ ವಿಮಾನ ನಿಲ್ದಾಣ ಕಾಮಗಾರಿಗೆ ಬಜೆಟ್ನಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು 175 ಕೋಟಿ ರೂಪಾಯಿ ಘೋಷಣೆ ಮಾಡಿದ್ದಾರೆ.
ಮುಖ್ಯಮಂತ್ರಿ ಅವರು ತಮ್ಮ ಬಜೆಟ್ ಭಾಷಣದ ವೇಳೆ ಈ ವಿಷಯ ಪ್ರಸ್ತಾಪಿಸಿದರು. ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಮತ್ತು ಹಾಸನ ಬಿಜೆಪಿ ಶಾಸಕ ಪ್ರೀತಂ ಗೌಡ ಮುಖ್ಯಮಂತ್ರಿಗಳನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಈ ವಿಚಾರದ ಬಗ್ಗೆ ಗಮನ ಸೆಳೆದಿದ್ದರು. ವಿಮಾನ ನಿಲ್ದಾಣಕ್ಕೆ ಭರ್ಜರಿ ಅನುದಾನ ನೀಡಿದ್ದಕ್ಕೆ ಮುಖ್ಯಮಂತ್ರಿಯವರನ್ನು ಶಾಸಕ ಪ್ರೀತಂಗೌಡ ಅಭಿನಂದಿಸಿದ್ದಾರೆ.
ಈ ಯೋಜನೆಗೆ 2007ರಲ್ಲಿ ಜಿಲ್ಲಾ ಪ್ರಾಧಿಕಾರ 536 ಎಕರೆ ಪ್ರದೇಶವನ್ನು ಏಳು ಗ್ರಾಮಗಳಿಂದ ಪಡೆದಿತ್ತು. ಅದು ವಿಮಾನ ನಿಲ್ದಾಣ ಸ್ಥಾಪನೆಗೆ ಮೊದಲ ಹೆಜ್ಜೆಯಾಗಿತ್ತು. ಎರಡು ದಶಕಗಳ ಹಿಂದೆ ಹಾಸನದ ಬುವನಹಳ್ಳಿಯಲ್ಲಿ ಶಂಕುಸ್ಥಾಪನೆ ನೆರವೇರಿಸಿದ ನಂತರ ಅದನ್ನು ನಿರ್ಲಕ್ಷಿಸಲಾಗಿತ್ತು. ಜಿಲ್ಲೆಯ ಕೃಷಿ ಉತ್ಪನ್ನಗಳನ್ನು ವಿದೇಶಕ್ಕೆ ರಫ್ತು ಮಾಡುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.