

ಬೆಳಗಾವಿ: ಅಧಿವೇಶನದ ರಜೆಯಲ್ಲಿ ಗೋವಾಗೆ ತೆರಳುವ ಉತ್ತರ ಕರ್ನಾಟಕದ ಕೆಲ ಶಾಸಕರನ್ನು ಗುರಿಯಾಗಿಸಿಕೊಂಡು ಹನಿಟ್ರ್ಯಾಪ್ ಮಾಡುವ ಸಾಧ್ಯತೆ ಇದೆ ಎಂದು ಸಾಮಾಜಿಕ ಕಾರ್ಯಕರ್ತ ರಾಜಶೇಖರ ಮುಲಾಲಿ ಹೊಸ ಬಾಂಬ್ ಸಿಡಿಸಿದ್ದಾರೆ.
ಸೋಮವಾರ ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕದ ಶಾಸಕರನ್ನು ದುರುಪಯೋಗ ಪಡೆಸಿಕೊಳ್ಳಲಾಗುತ್ತಿದೆ. ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ ಶಾಸಕರು ತಾಂತ್ರಿಕವಾಗಿ ಹಿಂದೆ ಇದ್ದಾರೆ ಎಂದು ಹೇಳಿದರು.
ಅಧಿವೇಶನದ ವೇಳೆ ರಜೆಯ ಎರಡು ದಿನ ಅನೇಕ ಶಾಸಕರು ಗೋವಾಗೆ ತೆರಳುತ್ತಾರೆ. ಅಲ್ಲಿ ಏನೆಲ್ಲ ಮಾಡುತ್ತಾರೆ ಎಂಬುದು ನಮಗೆ ಗೊತ್ತಿದೆ. ಅಲ್ಲಿಗೆ ಹೋಗಬೇಡಿ. ಅನೈತಿಕ ಚಟುವಟಿಕೆಯಲ್ಲಿ ಭಾಗಿಯಾಗಬೇಡಿ. ಸಲಿಸಾಗಿ ಷಡ್ಯಂತ್ರಕ್ಕೆ ಬಲಿಯಾಗುತ್ತಿರಿ, ಮೈ ಮರೆಯಬೇಡಿ ಎಂದು ಉತ್ತರ ಕರ್ನಾಟಕ ಶಾಸಕರಿಗೆ ಎಚ್ಚರಿಕೆ ನೀಡಿದರು.
ದಿನೇಶ್ ಕಲಹಳ್ಳಿ ದೂರು ವಾಪಸ್ ಪಡೆದ ವಿಚಾರದ ಪ್ರಶ್ನೆಗೆ ಉತ್ತರಿಸಿದ ಅವರು, ನನಗೂ ಅದಕ್ಕೂ ಸಂಬಂಧ ಇಲ್ಲ. ಈಗಾಗಲೇ ಹೇಳಿದ್ದೇನೆ ಇದೊಂದು ದೊಡ್ಡ ಷಡ್ಯಂತ್ರ ಎಂದು. ಇಡೀ ಪ್ರಕರಣ ಅನುಮಾನದಿಂದ ಕೂಡಿದೆ. ಯಾಕೆಂದರೆ ರಮೇಶ್ ಜಾರಕಿಹೊಳಿ ಪ್ರಭಾವಿ ರಾಜಕಾರಣಿ ಇದ್ದಾರೆ. ಮುಂದೆ ಸಿಎಂ ಆಗುತ್ತಾರೆ ಎಂದು ಈ ರೀತಿ ಕೆಲಸ ಮಾಡಿದ್ದಾರೆ ಎಂದರು.
ನನ್ನ ಬಳಿ ಸಿಡಿ ಇರುವ ಬಗ್ಗೆ ಎಲ್ಲಿಯೂ ಹೇಳಿಲ್ಲ. ಮಾಧ್ಯಮದಲ್ಲಿ ಆ ರೀತಿಯಲ್ಲಿ ಸುದ್ದಿ ಬಿತ್ತರ ಮಾಡಿದ್ದಕ್ಕೆ, ಮಂಡ್ಯ ಮೂಲದ ಮಹಿಳೆ ಕೆ.ಎಚ್.ಇಂದಿರಾ ಎಂಬುವವರ ದೂರಿನ ಮೇರೆಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಮಂಡ್ಯದಿಂದ ಬೆಂಗಳೂರುವರೆಗೆ ಅಷ್ಟೊಂದು ಪೊಲೀಸ್ ಠಾಣೆ ಬರುತ್ತವೆ. ಎಲ್ಲ ಬಿಟ್ಟು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರು ನೀಡುಲು ಮಹಿಳೆ ಹಿಂದೆ ಮಾಜಿ ಸಿಎಂ ಕೈವಾಡ ಇದೆ ಎಂದರು.
ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಪೊಲೀಸರಿಂದ ನೋಟಿಸ್ ನೀಡಿದ ವಿಚಾರಕ್ಕೆ ಉತ್ತರಿಸಿದ ಅವರು, ಹೌದು ನನಗೆ ನೋಟೀಸ್ ಬಂದಿದೆ. ಇವತ್ತು ವಿಚಾರಣೆ ಇತ್ತು. ಬೆಳಗಾವಿಯಲ್ಲಿದ್ದೇನೆ, ಪೂರ್ವ ನಿಯೋಜಿತ ಕಾರ್ಯಕ್ರಮ ಇರುವುದರಿಂದ ವಿಚಾರಣೆಗೆ ಹಾಜರಾಗಲು ಆಗಿಲ್ಲ ಎಂದರು.