

ಮೂಲ್ಕಿ: ಕಾರ್ನಾಡು ಗೇರುಕಟ್ಟೆ ಬಳಿ ನಿರ್ಮಾಣಗೊಂಡಿದ್ದ ಅಂತರ್ಜಲ ವೃದ್ಧಿಯ ಕೆರೆ ಅಭಿವೃದ್ಧಿ ಕಾಮಗಾರಿ ಎರಡನೇ ಬಾರಿ ಕೂಡ ನಿರೀಕ್ಷಿತ ಮಟ್ಟ ಕಾಣದೆ ಮಳೆಗಾಲ ಆರಂಭವಾಗುತ್ತಲೇ ಕುಸಿಯುತ್ತಿದೆ.
ಅಂತರ್ಜಲ ವೃದ್ಧಿಗೆ ಮೂಲ್ಕಿ ನಪಂಯ 2017-18ನೇ ಸಾಲಿನ 14ನೇ ಹಣಕಾಸು ಯೋಜನೆಯಲ್ಲಿ 1.75 ಲಕ್ಷ ರೂ. ವೆಚ್ಚದಲ್ಲಿ ಕೆರೆ ಹೂಳೆತ್ತುವ ಕಾಮಗಾರಿ ಪ್ರಥಮವಾಗಿ ನಡೆದಿದ್ದು, ಬಳಿಕ 2020-21ರಲ್ಲಿ 6 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ನಡೆದಿತ್ತು. ಬಳಿಕ ಮಂಗಳೂರಿನ ಮುಡಾದವರು ಲಕ್ಷಾಂತರ ರೂ. ವೆಚ್ಚದಲ್ಲಿ ನಡೆಸಿದ ತಡೆಗೋಡೆ ನಿರ್ಮಾಣ ಕಾಮಗಾರಿ ತೀರಾ ಕಳಪೆಯಾಗಿ ಕೆರೆಯ ಬದಿ ಕುಸಿತದ ಭೀತಿ ಎದುರಿಸುತ್ತಿರುವ ಬಗ್ಗೆ ‘ವಿಜಯವಾಣಿ’ಯಲ್ಲಿ ವರದಿ ಪ್ರಕಟವಾಗುತ್ತಲೇ ಎಚ್ಚೆತ್ತ ಅಧಿಕಾರಿಗಳು ಕಳೆದ ಬೇಸಿಗೆಯಲ್ಲಿ ಸರಿಪಡಿಸಿದ್ದರು.
ಆದರೆ ಮಳೆಗಾಲ ಆರಂಭವಾಗುತ್ತಲೇ ಕೆರೆ ಬದಿಯಲ್ಲಿ ಸರಿಪಡಿಸಲಾದ ನೂತನ ತಡೆಗೋಡೆ ಕುಸಿತ ಕಾಣುತ್ತಿದ್ದು, ತೀರಾ ಅಪಾಯಕಾರಿಯಾಗಿ ಪರಿಣಮಿಸಿದೆ. ಕೆರೆ ಬದಿಯ ಹೆದ್ದಾರಿ ಚರಂಡಿಯಲ್ಲಿ ಕೆಲವರು ತ್ಯಾಜ್ಯ ಬಿಸಾಡುತ್ತಿದ್ದು ಇದೇ ನೀರು ಕೆರೆಗೆ ಹರಿದು ರೋಗಗಳ ಭೀತಿ ಎದುರಾಗಿದೆ.
ಮುಡಾ ವತಿಯಿಂದ ಎರಡನೇ ಬಾರಿ ನಡೆದ ಅಂತರ್ಜಲ ವೃದ್ಧಿ ಕೆರೆ ಕಾಮಗಾರಿಯೂ ಕಳಪೆಯಾಗಿದ್ದು, ಜನರ ತೆರಿಗೆ ಹಣ ಪೋಲು ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ಸಾಮಾಜಿಕ ಕಾರ್ಯಕರ್ತರು ಶರತ್ ಕಾರ್ನಾಡ್ ತಿಳಿಸಿದ್ದಾರೆ.