

ಪಡುಬಿದ್ರಿ: ಕಾಪು ಮಾರಿಯಮ್ಮನ ಸಾನ್ನಿಧ್ಯದಲ್ಲಿ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ ಪೂರ್ವಭಾವಿಯಾಗಿ ನವದುರ್ಗಾ ಲೇಖನವನ್ನು ಬರೆಯುವ ಮಹಾ ಸಂಕಲ್ಪವನ್ನು ಲೋಕಕಲ್ಯಾಣಾರ್ಥವಾಗಿ ಮತ್ತು ಸಾನ್ನಿಧ್ಯ ವೃದ್ಧಿಗಾಗಿ ಆಯೋಜಿಸಲಾಗಿದ್ದು ಆ ಪ್ರಯುಕ್ತ ಅ.20ರಿಂದ 28ರವರೆಗೆ ನವದಿನಗಳ ಪರ್ಯಂತ ಸೂರ್ಯೋದಯದಿಂದ ಸೂರ್ಯಾಸ್ತಮಾನದವರೆಗೆ ಉಡುಪಿ ಮತ್ತು ದ.ಕ. ಜಿಲ್ಲೆಯನ್ನೊಳಗೊಂಡ 108 ತಂಡಗಳಿಂದ ಭಜನಾ ಸಂಕೀರ್ತನೆ ನಡೆಯಲಿದೆ. 26ರಂದು ಸಂಜೆ 6 ಗಂಟೆಯಿಂದ ಆಹ್ವಾನಿತ ತಂಡಗಳ ರಾಜ್ಯಮಟ್ಟದ ಕುಣಿತ ಭಜನಾ ಸ್ಪರ್ಧೆ ನಡೆಯಲಿದೆ.
29ರಂದು ವಾಗೀಶ್ವರಿ ಪೂಜೆ ಮೂಲಕ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ನವದುರ್ಗಾ ಲೇಖನವನ್ನು ಬರೆದು ಗಣ್ಯರ ಸಮ್ಮುಖದಲ್ಲಿ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ನವದುರ್ಗಾ ಲೇಖನದ ಪುಸ್ತಕವನ್ನು ಭಕ್ತರಿಗೆ ನೀಡಲಿದ್ದಾರೆ ಎಂದು ದೇವಳದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ, ಕಾರ್ಯಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ, ನವದುರ್ಗಾ ಲೇಖನ ಯಜ್ಞ ಸಮಿತಿ ಅಧ್ಯಕ್ಷ ಕೆ.ರಘುಪತಿ ಭಟ್ ಮತ್ತು ಪ್ರಧಾನ ಕಾರ್ಯದರ್ಶಿ ಯೋಗೀಶ್ ವಿ.ಶೆಟ್ಟಿ ತಿಳಿಸಿದ್ದಾರೆ.