8ರಂದು ಕಾಪು ದಂಡತೀರ್ಥ ಕಾಲೇಜು ರಜತ ಮಹೋತ್ಸವ

dandateertha
ಕಾಪು ದಂಡತೀರ್ಥ ಪದವಿಪೂರ್ವ ಕಾಲೇಜು.
Published on

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ಕಾಪು ದಂಡತೀರ್ಥ ಪದವಿಪೂರ್ವ ಕಾಲೇಜಿನ ರಜತ ಮಹೋತ್ಸವ ನ.8ರಂದು ನಡೆಯಲಿದೆ ಎಂದು ಕಾಪು ಉಳಿಯಾರಗೋಳಿ ದಂಡತೀರ್ಥ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಡಾ.ಪ್ರಶಾಂತ್ ಶೆಟ್ಟಿ ತಿಳಿಸಿದರು.

1999ರಲ್ಲಿ ದಿ.ಡಾ.ಪ್ರಭಾಕರ ಶೆಟ್ಟಿಯವರ ಸಂಚಾಲಕತ್ವದಲ್ಲಿ ವಿಜ್ಞಾನ ವಿಭಾಗ ಮೂಲಕ ಪದವಿಪೂರ್ವ ಕಾಲೇಜು ಆರಂಭಿಸಲಾಗಿತ್ತು. 2000ದಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗ ತೆರೆಯಲಾಯಿತು. ರಜತ ಮಹೋತ್ಸವ ವರ್ಷಾಚರಣೆ ಅಂಗವಾಗಿ ಉಡುಪಿ ವಲಯ ಮಟ್ಟದ ಬಾಲಕ ಬಾಲಕಿಯರ ಕರಾಟೆ ಪಂದ್ಯಾಟ, ಮುದ್ದು ಕೃಷ್ಣ ವೇಷ ಸ್ಪರ್ಧೆ, ಕಾಲೇಜು ವಿದ್ಯಾರ್ಥಿಗಳ ಪ್ರತಿಭಾನ್ವೇಷಣಾ ಕಾರ್ಯಕ್ರಮ, ವಿಜ್ಞಾನ ಮತ್ತು ಕಲಾ ಮಾದರಿ ಪ್ರದರ್ಶನ ಹಾಗೂ ಆಹಾರ ಮೇಳ ಸಂಘಟಿಸಲಾಗಿತ್ತು ಎಂದು ಕಾಪುವಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಒಂದು ಕೋಟಿ ರೂ. ವಿದ್ಯಾನಿಧಿ ಸ್ಥಾಪನೆ ಗುರಿ: ವಿದ್ಯಾನಿಧಿ ಸ್ಥಾಪಿಸಿ ಪ್ರತಿ ವರ್ಷ ಕಾಲೇಜಿನಲ್ಲಿ ವ್ಯಾಸಂಗ ಮಾಡುವ ಬಡ ವರ್ಗದ ವಿದ್ಯಾರ್ಥಿಗಳಿಗೆ ಲಕ್ಷಾಂತರ ರೂ. ಮೊತ್ತದ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ರಜತ ಮಹೋತ್ಸವ ಸಂದರ್ಭ ವಿದ್ಯಾನಿಧಿಯನ್ನು ಒಂದು ಕೋಟಿ ರೂ.ಗೆ ಏರಿಸುವ ಗುರಿ ಹೊಂದಲಾಗಿದೆ. ಆ ಮೂಲಕ ನಿರಂತರವಾಗಿ ಬಡ ವರ್ಗದ ವಿದ್ಯಾರ್ಥಿಗಳಿಗೆ ನೆರವು ನೀಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.

ಸ್ಥಾಪಕರ ಪುತ್ಥಳಿ ಅನಾವರಣ: ನ.7ರಂದು ಶಾಲಾ ವಾಷಿಕೋತ್ಸವ ಹಾಗೂ ಬಹುಮಾನ ವಿತರಣಾ ಸಮಾರಂಭ, 8ರಂದು ಸಂಜೆ 5.30ಕ್ಕೆ ರಜತ ಮಹೋತ್ಸವ ಸಮಾರಂಭ ನಡೆಯಲಿದ್ದು, ಎಂಆರ್‌ಜಿ ಗ್ರೂಫ್‌ನ ಚೇರ್ಮನ್ ಕೆ.ಪ್ರಕಾಶ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅಧ್ಯಕ್ಷತೆ ವಹಿಸುವರು. ನಿಟ್ಟೆ ವಿವಿ ಸಹ ಕುಲಾಧಿಪತಿ ಡಾ.ಎಂ.ಶಾಂತಾರಾಮ ಶೆಟ್ಟಿ ಮತ್ತು ಮಣಿಪಾಲ ವಿವಿ ಸಹ ಕುಲಾಧಿಪತಿ ಡಾ.ಎಸ್.ಎಸ್.ಬಲ್ಲಾಳ್ ಅವರು ಸ್ಥಾಪಕ ದಿ.ಡಾ.ಕೆ.ಪ್ರಭಾಕರ ಶೆಟ್ಟಿ ಅವರ ಪುತ್ಥಳಿ ಅನಾವರಣಗೊಳಿಸುವರು. ಮಸ್ಕತ್ ಮಲ್ಟಿಟೆಕ್ ಗ್ರೂಫ್ ಸ್ಥಾಪಕ ದಿವಾಕರ ಶೆಟ್ಟಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಉದ್ಯಮಿ ಮೊಹಮ್ಮದ್ ಅಸ್ಲಾಂ ಖಾಝಿ, ಡಾ.ಚಂದ್ರಶೇಖರ ಶೆಟ್ಟಿ, ಡಾ.ಅಶೋಕ್ ಹೆಗ್ಡೆ, ಡಿಡಿಪಿಯು ಮಾರುತಿ, ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ, ಕೆ.ವಾಸುದೇವ ಶೆಟ್ಟಿ, ಮಹೋಹರ ಎಸ್.ಶೆಟ್ಟಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಲೇಜು ಪ್ರಾಂಶುಪಾಲ ನೀಲಾನಂದ ನಾಯ್ಕ, ಪ್ರಾಥಮಿಕ ವಿಭಾಗ ಮುಖ್ಯಶಿಕ್ಷಕ ಗ್ಯಾಬ್ರಿಯಲ್ ಎಫ್.ಮಸ್ಕರೇನಸ್, ಆಡಳಿತಾಧಿಕಾರಿ ಆಲ್ಬನ್ ರಾಡ್ರಿಗಸ್, ಶಿಕ್ಷಣ ಸಂಯೋಜಕ ಶಿವಣ್ಣ ಬಾಯಾರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net