ಯುವಜನರಲ್ಲಿ ಭಾಷಾಭಿಮಾನ ಉತ್ತಮ ಬೆಳವಣಿಗೆ

kannada ratha
ಚಿಕ್ಕಮಗಳೂರು ಜಿಲ್ಲೆಯಿಂದ ಆಗಮಿಸಿದ ಕನ್ನಡ ರಥವನ್ನು ಶಾಸಕ ಗುರುರಾಜ್ ಗಂಟಿಹೊಳೆ ಅವರು ಬೈಂದೂರು ಮೂಲಕ ಉಡುಪಿ ಜಿಲ್ಲೆಗೆ ಸ್ವಾಗತಿಸಿ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.
Published on

ವಿಜಯವಾಣಿ ಸುದ್ದಿಜಾಲ ಬೈಂದೂರು

ಕನ್ನಡದ ಕೈಂಕರ್ಯದ ಮನಸ್ಸು ಒಂದಾಗುವಾಗ ಕನ್ನಡಪರ ಚಟುವಟಿಕೆ ವೃದ್ಧಿಸುತ್ತದೆ. ಇತರ ಭಾಷೆ ವ್ಯಾಮೋಹದಲ್ಲಿ ಕನ್ನಡದ ಬಗ್ಗೆ ಕೀಳರಿಮೆ ಸಲ್ಲದು. ಭಾಷೆ ಉಳಿವು ಮತ್ತು ಬೆಳವಣಿಗೆ ಅದರಷ್ಟಕ್ಕೆ ನಡೆಯುತ್ತಿರುತ್ತದೆ. ಇತ್ತೀಚಿನ ದಿನಗಳಲ್ಲಿ ನೆಲ, ಜಲ, ಭಾಷಾಭಿಮಾನ ಯುವ ಸಮುದಾಯದಲ್ಲಿ ಹೆಚ್ಚುತ್ತಿರುವುದು ಉತ್ತಮ ಬೆಳವಣಿಗೆ ಎಂದು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.

ಚಿಕ್ಕಮಗಳೂರು ಜಿಲ್ಲೆಯಿಂದ ಉಡುಪಿ ಜಿಲ್ಲೆಗೆ ಆಗಮಿಸಿದ ಕನ್ನಡ ರಥವನ್ನು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಬೈಂದೂರು ತಾಲೂಕು ಕಸಾಪ ಘಟಕ, ಬೈಂದೂರು ತಾಲೂಕು ಆಡಳಿತ ವತಿಯಿಂದ ಸ್ವಾಗತಿಸಿ, ಭುವನೇಶ್ವರಿ ಮಾತೆಗೆ ಪುಷ್ಪನಮನ ಸಲ್ಲಿಸಿ, ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.

ತಹಸೀಲ್ದಾರ್ ಪ್ರದೀಪ್ ಆರ್., ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ತಾಲೂಕು ಆರೋಗ್ಯ ಅಧಿಕಾರಿ ಡಾ.ಪ್ರೇಮಾನಂದ, ತಾಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾರತಿ ಎನ್., ಬೈಂದೂರು ಪಪಂ ಮುಖ್ಯಾಧಿಕಾರಿ ಅಜಯ್ ಭಂಡಾರ್‌ಕಾರ್, ಸಾಹಿತಿ ಚಂದ್ರಶೇಖರ ನಾವಡ, ಉಪ ತಹಸೀಲ್ದಾರ್ ಲತಾ ಶೆಟ್ಟಿ, ಸಪಪೂ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಪಿ.ನಾಯ್ಕ, ಸ.ಪ್ರ.ದರ್ಜೆ ಕಾಲೇಜಿನ ಪ್ರಾಂಶುಪಾಲ ನಾಗರಾಜ ಶೆಟ್ಟಿ, ಬೈಂದೂರು ಮಾದರಿ ಶಾಲೆ ಮುಖ್ಯಶಿಕ್ಷಕ ಜನಾರ್ದನ ದೇವಾಡಿಗ, ಸಾಹಿತಿ ಕೆ.ಪುಂಡಲೀಕ ನಾಯಕ್, ಜನಪದ ಪರಿಷತ್ ಅಧ್ಯಕ್ಷ ಗೋವಿಂದ ಬಿಲ್ಲವ, ಠಾಣಾಧಿಕಾರಿ ನವೀನ್ ಬೋರ್ಕರ್, ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ, ಮೆಸ್ಕಾಂ, ಕಂದಾಯ ಇಲಾಖೆ, ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಇದ್ದರು.

ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಪ್ರಾಸ್ತಾವಿಕ ಮಾತನಾಡಿದರು. ಕಸಾಪ ಬೈಂದೂರು ಘಟಕದ ಕಾರ್ಯದರ್ಶಿ ಸುಧಾಕರ ಪಿ. ಸ್ವಾಗತಿಸಿದರು. ಸದಸ್ಯ ಗಣಪತಿ ಹೋಬಳಿದಾರ್ ನಿರೂಪಿಸಿದರು. ಪತ್ರಕರ್ತ ಅರುಣ್ ಕುಮಾರ್ ಶಿರೂರು ವಂದಿಸಿದರು.

ಬಳಿಕ ಬೈಂದೂರು ತಾಲೂಕು ಆಡಳಿತ ಕಚೇರಿಯಿಂದ ಬೈಂದೂರು ಸರ್ಕಲ್‌ವರೆಗೆ ಮೆರವಣಿಗೆ ಮೂಲಕ ಕನ್ನಡ ರಥವನ್ನು ಬೀಳ್ಕೊಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net