

ಬೆಂಗಳೂರು: ಸಾಂವಿಧಾನಿಕ ಸಂಸ್ಥೆಯಲ್ಲಿಯೇ ಹೆಣ್ಣುಮಕ್ಕಳಿಗೆ ಗೌರವ- ರಕ್ಷಣೆ ಇಲ್ಲವಾಗಿದೆ ಎಂದು ಸುಪ್ರಿಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಬೇಸರ ವ್ಯಕ್ತಪಡಿಸಿದ್ದಾರೆ.
ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆಯು ನಗರದ ಕನ್ನಡ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಕನ್ನಡ ನುಡಿ’ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಸಂಸತ್ ಅಥವಾ ಸದನ ಯಾವುದೇ ತಾಣವಾಗಿರಲಿ, ಎಲ್ಲ ರಂಗದಲ್ಲಿಯೂ ಸಾಂಸ್ಕೃತಿಕ ವೇದಿಕೆ ಇರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಅಂತಹ ಸ್ಥಳಗಳಲ್ಲಿಯೇ ಮಹಿಳೆಗೆ ಗೌರವ ಸಿಗುತ್ತಿಲ್ಲ. ಇದಕ್ಕೆ ಇತ್ತೀಚೆಗೆ ಬೆಳಗಾವಿ ಅಧಿವೇಶನದಲ್ಲಿ ನಡೆದ ಘಟನೆಯೇ ಸಾಕ್ಷಿ ಎಂದರು.
ಜನಪ್ರತಿನಿಧಿಗಳಿಗೆ ಸದನದಂತಹ ಪವಿತ್ರ ಸ್ಥಳದಲ್ಲಿ ಹೇಗೆ ಮಾತನಾಡಬೇಕು ಎಂಬುದೇ ತಿಳಿದಿಲ್ಲ. ಮಹಿಳೆಗೆ ಹೇಗೆ ಗೌರವ ನೀಡಬೇಕು ಎನ್ನುವುದೂ ಗೊತ್ತಿಲ್ಲ. ಒಬ್ಬ ಮಹಿಳೆಯನ್ನು ಅವಾಚ್ಯ ಶಬ್ದದಿಂದ ನಿಂದಿಸಿದರೂ ‘ಹಾಗೆ ಹೇಳಿಲ್ಲ’ ಎಂದು ಸಮರ್ಥಿಸಿಕೊಳ್ಳಲಾಗುತ್ತಿದೆ. ಯಾವ ಮಹಿಳೆಯೂ ತನಗೆ ಬಂದಿರುವ ಇಂತಹ ಆರೋಪದ ಬಗ್ಗೆ ಸುಳ್ಳು ಹೇಳುವುದಿಲ್ಲ ಎಂದು ಹೇಳಿದರು.
ಬೆಳಗಾವಿ ಅಧಿವೇಶನದಲ್ಲಿ ನಡೆದ ಘಟನೆಗೆ ಆಡಿಯೋ, ವಿಡಿಯೋ ಸಾಕ್ಷಿ ಇಲ್ಲ ಎಂದು ಹೇಳುತ್ತಿರುವ ಸಭಾಪತಿಯವರು, ಮಹಿಳೆ ಕುರಿತು ಅವಾಚ್ಯ ಶಬ್ದಗಳನ್ನು ಹೇಳಿರುವುದಕ್ಕೆ ಸಾಕ್ಷಿ ಇದ್ದರೂ ಅವರ ಮಾತು ನಂಬಲು ಸಿದ್ಧರಿಲ್ಲ. ಇಂತಹ ಸಂದರ್ಭದಲ್ಲಿ ನಾವಿದ್ದೇವೆ. ಹೆಣ್ಣಿಗೆ ಅವಮಾನ ಮಾಡಿದಾಗ ಕ್ಷಮೆ ಕೇಳುವುದು ದೊಡ್ಡತನ ಎಂದು ಹೇಳಿದರು.
ಸಮ್ಮೇಳನಾಧ್ಯಕ್ಷ ಪ್ರೊ.ಕೆಆರ್. ಅಂಜಿನ ರೆಡ್ಡಿ ಮಾತನಾಡಿ, ಗಡಿ ಪ್ರದೇಶಗಳೂ ಸೇರಿ ಎಲ್ಲೆಡೆ ಮುಚ್ಚುತ್ತಿರುವ ಕನ್ನಡ ಶಾಲೆಗಳನ್ನು ಉಳಿಸುವ ಅನಿವಾರ್ಯ ಸ್ಥಿತಿ ಇದೆ. ಹಾಗಾದಾಗ ಮಾತ್ರ ಕನ್ನಡದ ಉಳಿವು ಸಾಧ್ಯ. ಶಿಕ್ಷಣ ಕ್ಷೇತ್ರದಲ್ಲಿ ಮಾತ್ರವಲ್ಲದೆ, ಆಡಳಿತ ಸೇರಿ ಎಲ್ಲ ರಂಗದಲ್ಲೂ ಕನ್ನಡಕ್ಕೆ ಆದ್ಯತೆ ನೀಡಬೇಕಿದೆ. ಆದರೆ ಗಡಿ ಪ್ರದೇಶಗಳಲ್ಲಿ ನೆರೆ ರಾಜ್ಯಗಳ ಭಾಷೆ ಬಳಕೆ ವ್ಯಾಪಕವಾಗಿದ್ದು, ಇವರ ನಡುವೆ ಕನ್ನಡ ಕಲಿತು ಉಳಿಸಬೇಕಿದೆ. ಹಾಗಾಗಿ ಅವರಂತೆ ನಮ್ಮಲ್ಲಿಯೂ ಭಾಷಾಭಿಮಾನ ಬೆಳೆಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.
ಕದಂಬ ರತ್ನ ಪ್ರಶಸ್ತಿ
‘ಕನ್ನಡ ನುಡಿ ಸಮ್ಮೇಳನ’ ದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಕದಂಬ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಿ.ಕೆ. ಸಪ್ತಶ್ರೀ (ಸಾರ್ವಜನಿಕ ಆಡಳಿತ), ಶೋಭಾ (ಶಿಕ್ಷಣ), ಪ್ರಿಯಾಂಕಾ ನೀಷ್ಮಾ ಡಿ. ಕೋಸ್ಟ್ (ಸಾರ್ವಜನಿಕ ಆಡಳಿತ), ಡಾ. ಚಂದ್ರಪ್ಪ (ಸಾಹಿತ್ಯ), ಟಿ. ಮನು (ಶಿಕ್ಷಣ), ಡಾ. ಬಿ.ವಿ. ನರಸಿಂಹಯ್ಯ (ಸಮಾಜಸೇವೆ) ಪ್ರಶಸ್ತಿ ಸ್ವೀಕರಿಸಿದರು.
ಕರ್ನಾಟಕ ಲೋಕಸೇವಾ ಆಯೋಗದ ನಿವೃತ್ತ ಅಧಿಕಾರಿ ಡಿ.ಎನ್. ಮುನಿಕೃಷ್ಣ, ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಸುರೇಶ್ ಜೀವನ್ಮುಖಿ, ಡಾ. ಆರ್.ಕೆ. ಸರೋಜಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಶೋಕ್ ಚಲವಾದಿ ಇತರರಿದ್ದರು.