

ಬೆಂಗಳೂರು: ನಗರದಲ್ಲಿ ಬುಧವಾರ ಸಡಗರ- ಸಂಭ್ರಮದಿಂದ ಕ್ರಿಸ್ಮಸ್ ಆಚರಿಸಲಾಯಿತು. ಹಬ್ಬದ ಪ್ರಯುಕ್ತ ಆಕರ್ಷಕವಾಗಿ ಅಲಂಕೃತಗೊಂಡಿದ್ದ ಚರ್ಚ್ಗಳಲ್ಲಿ ಬೆಳಗ್ಗೆ ಧರ್ಮಗುರುಗಳ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು.
ಮಂಗಳವಾರ ಮಧ್ಯರಾತ್ರಿಯಿಂದಲೇ ಹಬ್ಬದ ಸಂಭ್ರಮ ಕಳೆಗಟ್ಟಿತ್ತು. ಬಾಲ ಯೇಸುವನ್ನು ಬರಮಾಡಿಕೊಂಡ ಕ್ರೈಸ್ತ ಬಾಂಧವರು, ಬೆಳಗ್ಗೆ ಕುಟುಂಬಸಮೇತ ಚರ್ಚ್ಗಳಿಗೆ ತೆರಳಿ ಮೇಣದ ಬತ್ತಿ ಹೊತ್ತಿಸಿ ಧರ್ಮಗುರುಗಳ ನೇತೃತ್ವದಲ್ಲಿ ಯೇಸುಕ್ರಿಸ್ತ ಹಾಗೂ ಮೇರಿ ಮಾತೆಗೆ ನಮನ ಸಲ್ಲಿಸಿದರು. ಬಳಿಕ ಸಂಬಂಧಿಕರಿಗೆ ಹಾಗೂ ಸ್ನೇಹಿತರಿಗೆ ಉಡುಗೊರೆ ನೀಡಿ ಶುಭ ಕೋರಿದರು.
ಶಿವಾಜಿನಗರದ ಸೇಂಟ್ ಮೇರಿಸ್ ಬೆಸಿಲಿಕಾ, ಚಾಮರಾಜಪೇಟೆ ಸೇಂಟ್ ಜೋಸ್ಸೆ ಚರ್ಚ್, ಫ್ರೇಜರ್ ಟೌನ್ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಕೆಥೆಡ್ರಲ್ ಚರ್ಚ್, ಎಂ.ಜಿ. ರಸ್ತೆಯ ಈಸ್ಟ್ ಪರೇಡ್, ಸೇಂಟ್ ಜಾನ್ಸ್ ಚರ್ಚ್, ಬ್ರಿಗೇಡ್ ರಸ್ತೆಯ ಸೇಂಟ್ ಪ್ಯಾಟ್ರಿಕ್ಸ್ ಚರ್ಚ್, ಟಸ್ಕರ್ ಟೌನ್ನ ಸೇಂಟ್ ಆ್ಯಂಡ್ರೂಸ್ ಸೇರಿ ನಗರದಾದ್ಯಂತ ಚರ್ಚ್ಗಳಲ್ಲಿ ಯೇಸುವಿನ ಜೀವನಚರಿತ್ರೆ ಪರಿಚಯಿಸುವ ಗೋದಲಿಯನ್ನು ನಿರ್ಮಿಸಲಾಗಿತ್ತು.
ಸಾಂತಾಕ್ಲಾಸ್- ಕ್ರಿಸ್ಮಸ್ ಟ್ರೀ ಆಕರ್ಷಣೆ:
ಕ್ರಿಸ್ಮಸ್ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ಮಕ್ಕಳಿಗೆ ಸಾಂತಾಕ್ಲಾಸ್ ಪ್ರೀತಿಯ ಉಡುಗೊರೆಗಳನ್ನು ನೀಡಿ ಖುಷಿಪಡಿಸುತ್ತಾರೆ. ಹಾಗಾಗಿ ಹಬ್ಬದ ಪ್ರಯುಕ್ತ ಸಾಂತಾ ವೇಷಧಾರಿಗಳು ನಗರದ ಚರ್ಚ್ಗಳು, ಮಾಲ್ಗಳು ಸೇರಿ ಕೆಲ ಬಡಾವಣೆಗಳಲ್ಲಿ ಮಕ್ಕಳಿಗೆ ಸಿಹಿ ಹಾಗೂ ಉಡುಗೊರೆಗಳನ್ನು ವಿತರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಯುಬಿ ಸಿಟಿ, ಮಂತ್ರಿಮಾಲ್, ಗರುಡ ಮಾಲ್ ಮತ್ತಿತರ ಮಾಲ್ಗಳಲ್ಲಿ ಯೇಸುವಿನ ಗೋದಲಿ ಹಾಗೂ ಕ್ರಿಸ್ಮಸ್ ಟ್ರೀಗಳು ಜನಾಕರ್ಷಿಸಿದವು.
25 ಅಡಿ ಎತ್ತರದ ಸಾಂತಾಕ್ಲಾಸ್
ಕ್ರಿಸ್ಮಸ್ ಅಂಗವಾಗಿ ಕೋರಮಂಗಲದ ನೆಕ್ಸಸ್ ಮಾಲ್ನಲ್ಲಿ ನಿರ್ಮಿಸಲಾದ 25 ಅಡಿ ಎತ್ತರದ ಆಕರ್ಷಕ ನೀಲಿ ಬಣ್ಣದ ಸಾಂತಾಕ್ಲಾಸ್ ಪ್ರತಿಕೃತಿ ಎಲ್ಲರನ್ನು ಆಕರ್ಷಿಸುತ್ತಿದೆ. ಜೇಡಿ ಮಣ್ಣು, ಫೈಬರ್ ಮೌಲ್ಡ್, ಆಕ್ರಿಲಿಕ್ ಬಣ್ಣ ಬಳಸಿ ಈ ಪ್ರತಿಮೆ ನಿರ್ಮಿಸಿದ್ದು, ಮಕ್ಕಳಿಂದ ಹಿರಿಯರವರೆಗೂ ಎಲ್ಲರ ಗಮನ ಸೆಳೆಯುತ್ತಿದೆ.