

ಮೂಡುಬಿದಿರೆ: ತುಳು ಭಾಷೆಯ ಸಮೃದ್ಧಿಯನ್ನು ಯುವ ಸಮುದಾಯಕ್ಕೆ ಪರಿಚಯಿಸುವ ಇನ್ನೂ ಅನೇಕ ಕಾರ್ಯಕ್ರಮಗಳು ನಡೆಯಬೇಕು. ವಿದ್ಯಾರ್ಥಿಗಳಲ್ಲಿ ತುಳು ಭಾಷೆ ಮತ್ತು ಸಂಸ್ಕೃತಿಯ ಕುರಿತು ಆಸಕ್ತಿ ಮೂಡುವಂತೆ ಮಾಡಲು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ ಎಂದು ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಹೇಳಿದರು.
ಆಳ್ವಾಸ್ ಕಾಲೇಜಿನ(ಸ್ವಾಯತ್ತ) ತುಳು ಸಂಸ್ಕೃತಿ ಅಧ್ಯಯನ ಕೇಂದ್ರ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಶನಿವಾರ ಕಾಲೇಜಿನಲ್ಲಿ ನಡೆದ ‘ಡಿಜಿಟಲ್ ಲೋಕೊಡ್ ತುಳು’ ಒಂದು ದಿನದ ಬರವಣಿಗೆ ಕಮ್ಮಟವನ್ನು ಉದ್ಘಾಟಿಸಿ ಮಾತನಾಡಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಅಧ್ಯಕ್ಷತೆ ವಹಿಸಿ, ತುಳು ಸಾಹಿತ್ಯ ಅಕಾಡೆಮಿ ಸಾಂಪ್ರದಾಯಿಕ ಚೌಕಟ್ಟಿನಲ್ಲಿ ಹಿರಿ-ಕಿರಿಯರ ಸಹಭಾಗಿತ್ವದಲ್ಲಿ ನಿರಂತರವಾಗಿ ಕಾರ್ಯಕ್ರಮ ಆಯೋಜಿಸುತ್ತಿರುವುದು ಸಂತೋಷದ ವಿಷಯ ಎಂದರು.
ಸಂತ ಅಲೋಶಿಯಸ್ ಪರಿಗಣಿತ ವಿವಿಯ ನಿವೃತ್ತ ಪ್ರಾಧ್ಯಾಪಕ ಡಾ.ವಿಶ್ವನಾಥ ಬದಿಕಾನ ಕಮ್ಮಟವನ್ನು ನಡೆಸಿಕೊಟ್ಟರು. ಅಕಾಡೆಮಿ ಸದಸ್ಯ ಪಾಂಗಳ ಬಾಬು ಕೊರಗ, ಪ್ರಾಂಶುಪಾಲ ಡಾ.ಕುರಿಯನ್ ಇದ್ದರು. ಡಾ.ಯೋಗೀಶ ಕೈರೋಡಿ ಸ್ವಾಗತಿಸಿದರು. ಸೌಮ್ಯ ಕುಂದರ್ ನಿರೂಪಿಸಿದರು. ಅನಿಶಾ ಶೆಟ್ಟಿ ವಂದಿಸಿದರು. ಕಾಲೇಜಿನ 50 ವಿದ್ಯಾರ್ಥಿಗಳು ಪಾಲ್ಗೊಂಡರು.