

ಗುರುಪುರ: ಮಕ್ಕಳ ಸುರಕ್ಷತೆ ಮತ್ತು ಯೋಗಕ್ಷೇಮ ಖಚಿತಪಡಿಸಿಕೊಳ್ಳುವಲ್ಲಿ ಮಕ್ಕಳ ರಕ್ಷಣಾ ನೀತಿಗಳು ಪ್ರಮುಖವಾಗಿದ್ದು, ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ವಾತಾವರಣ ನಿರ್ಮಿಸುವುದು ಶಿಕ್ಷಕರ ಜವಾಬ್ದಾರಿ. ಈ ನಿಟ್ಟಿನಲ್ಲಿ ಮಕ್ಕಳ ರಕ್ಷಣಾ ನೀತಿ-2016 ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಎಲ್ಲ ವಿಭಾಗದ ಅಧಿಕಾರಿಗಳು ಪ್ರಯತ್ನಿಸಬೇಕು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಪದವಿಪೂರ್ವ ಕಾಲೇಜು ಪ್ರಾಚಾರ್ಯರ ಸಂಘ ಮತ್ತು ಭಾರತೀಯ ರೆಡ್ಕ್ರಾಸ್ ಸಂಸ್ಥೆ ದ.ಕ ಜಿಲ್ಲಾ ಶಾಖೆ ಮಂಗಳೂರು ಜಂಟಿ ಆಶ್ರಯದಲ್ಲಿ ಮಕ್ಕಳ ರಕ್ಷಣಾ ನೀತಿ 2016ರ(ಪರಿಷ್ಕರಣೆ 2023) ಅನುಷ್ಠಾನ ಹಾಗೂ ಮಾದಕ ವ್ಯಸನ ತಡೆ ಕುರಿತು ದಕ್ಷಿಣ ಕನ್ನಡ ಜಿಲ್ಲೆಯ ಪಿಯು ಕಾಲೇಜುಗಳ ಪ್ರಾಂಶುಪಾಲರಿಗೆ ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಪ್ರೇರಣಾ ಸಭಾಂಗಣದಲ್ಲಿ ಏರ್ಪಡಿಸಲಾದ ಒಂದು ದಿನದ ವಿಶೇಷ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಯುನಿಸೆಫ್ ಮಕ್ಕಳ ಸಂರಕ್ಷಣಾ ಯೋಜನೆ ಪ್ರಾದೇಶಿಕ ಸಂಯೋಜಕ ಡಾ.ಕೆ.ರಾಘವೇಂದ್ರ ಭಟ್ ಮಾತನಾಡಿದರು. ಶಾಲಾ ಶಿಕ್ಷಣ ಇಲಾಖೆ(ಪಿಯು) ಪ್ರಭಾರ ಉಪನಿರ್ದೇಶಕ ಶ್ರೀಧರ್ ಎಚ್.ಜಿ. ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶ್ವೇತಾ ಎನ್. ಉಪಸ್ಥಿತರಿದ್ದರು.
ರೆಡ್ಕ್ರಾಸ್ ಸಂಸ್ಥೆ ದ.ಕ ಜಿಲ್ಲಾ ಶಾಖೆಯ ಸಭಾಪತಿ ಸಿಎ ಶಾಂತಾರಾಮ ಶೆಟ್ಟಿ ಸ್ವಾಗತಿಸಿದರು. ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕ ಉಮೇಶ್ ಕೆ. ನಿರೂಪಿಸಿದರು. ಸಂಘದ ಅಧ್ಯಕ್ಷ ಜಯಾನಂದ ಎನ್.ಸುವರ್ಣ ವಂದಿಸಿದರು.
ಜಿಲ್ಲೆಯಲ್ಲಿ ಹದಿಹರೆಯದ ಮಕ್ಕಳು ಮಾದಕ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಇದನ್ನು ತಡೆಯಲು ಸಮಾಜದ ಸಾಮೂಹಿಕ ಜವಾಬ್ದಾರಿ ವಹಿಸುವ ಅಗತ್ಯವಿದೆ. ಅನಿಲ್ ಕುಮಾರ್ ಭೂಮರೆಡ್ಡಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ.