ಕಲಬುರಗಿ: ಪ್ರವಾಸೋದ್ಯಮ ಕ್ಷೇತ್ರ ಇಂದು ಆರ್ಥಿಕ ಬೆಳವಣಿಗೆಯ ಪ್ರಮುಖ ಚಾಲನಾ ಶಕ್ತಿಯಾಗಿ ರೂಪಗೊಂಡಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಅನೇಕ ಪ್ರವಾಸಿ ತಾಣಗಳಿದ್ದು, ಇವುಗಳನ್ನು ಪ್ರವಾಸಿಗರಿಗೆ ಪರಿಚಯಿಸುವ ಕಾರ್ಯ ಮಾಡಿದಲ್ಲಿ ಕ್ಷಿಪ್ರ ಆರ್ಥಿಕ ಬೆಳವಣಿಗೆ ಸಾಧ್ಯ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಆರ್.ಆರ್.ಬಿರಾದಾರ್ ಹೇಳಿದರು.
ಕೋಟೆ ಆವರಣದಲ್ಲಿ ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಮತ್ತು ಶರಣಬಸವ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಶುಕ್ರವಾರ ಆಯೋಜಿಸಿದ್ದ ಪರಂಪರೆ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಸುಮಾರು 65 ಐತಿಹಾಸಿಕ ಪ್ರವಾಸಿ ತಾಣಗಳಿದ್ದು, ಪ್ರವಾಸಿಗರನ್ನು ಆಕರ್ಷಿಸುವಂತೆ ಮಾಡುವುದು ಅತ್ಯಗತ್ಯ ಎಂದರು.
ದೇಶದ ಒಟ್ಟಾರೆ ಜಿಡಿಪಿ 346 ಕೋಟಿ ರೂ. ಇದ್ದು, ಇದರಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಪಾಲು ಶೇ.6 ಇದೆ. ಭಾರತದಾದ್ಯಂತ 303 ಕೋಟಿ ಜನ ಪ್ರವಾಸಿಗರು ವಿವಿಧ ಪ್ರವಾಸಿ ಸ್ಥಳಕ್ಕೆ ಭೇಟಿ ನೀಡುತ್ತಾರೆ. ವಿದೇಶಿಯರ ಸಂಖ್ಯೆ 9.9 ಕೋಟಿ ಇದೆ. ಪ್ರವಾಸೋದ್ಯಮ ತೀವ್ರಗತಿಯಲ್ಲಿ ಬೆಳೆಯುತ್ತಿರುವ ಕ್ಷೇತ್ರ ಎಂದು ಹೇಳಿದರು.
ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಬೇಬಿ ಮೊಗೇರ್ ಜಾಥಾಕ್ಕೆ ಚಾಲನೆ ನೀಡಿದರು.
ಕೋಟೆಯ ಜಾಮೀಯಾ ಮಸೀದಿ, ಉದ್ದದ ತೋಪು ನೋಡಿದ ವಿದ್ಯಾರ್ಥಿಗಳ ತಂಡ ಕಾಲ್ನಡಿಗೆ ಮೂಲಕ ಶ್ರೀ ಶರಣಬಸವೇಶ್ವರ ದೇವಸ್ಥಾನದವರೆಗೆ ಸಾಗಿ ಸಂಪನ್ನಗೊಂಡಿತು. ನಡಿಗೆಯುದ್ದಕ್ಕೂ ಇಂಟೆಕ್ ಕಲಬುರಗಿ ಅಧ್ಯಾಯದ ಡಾ.ಶಂಭುಲಿಂಗ ವಾಣಿ ಅವರು ಕೋಟೆ ಇತಿಹಾಸ, ವೈಶಿಷ್ಠವನ್ನು ತಿಳಿಹೇಳಿದರು.
ಪ್ರವಾಸಿ ಅಧಿಕಾರಿ ಅರುಣಕುಮಾರ, ಸಿಯುಕೆ ವ್ಯವಹಾರ ಅಧ್ಯಯನದ ಡೀನ್ ಪ್ರೊ. ಪಾಂಡುರಂಗ ಪತ್ತಿ, ಪ್ರವಾಸೋದ್ಯಮ ಮತ್ತು ಹೋಟೆಲ್ ನಿರ್ವಹಣಾ ವಿಭಾಗದ ಮುಖ್ಯಸ್ಥ ಡಾ.ಮಹೇಂದ್ರ ಜಿ., ಪ್ರಾಧ್ಯಾಪಕಿ ಪ್ರೊ.ಅಂಕತಿ ರು, ಅಸೋಸಿಯೇಟ್ ಪ್ರೊಫೆಸರ್ ಡಾ.ಗೌತಮ್, ಕೆಟಿಎಫ್ ಕಲಬುರಗಿ ಎಸ್.ಸಂಧ್ಯಾರಾಜ್, ಶರಣಬಸವ ವಿಶ್ವವಿದ್ಯಾಲಯದ ಪ್ರವಾಸೋದ್ಯಮ ವಿಭಾಗದ ಮುಖ್ಯಸ್ಥ ಕಲ್ಯಾಣರಾವ್ ಪಾಟೀಲ್, ಎಎಸ್ಐ ಅಧಿಕಾರಿ ನಂದಕುಮಾರ ಇತರರಿದ್ದರು.