ಗ್ರಾಮೀಣಾಭಿವೃದ್ಧಿ ದಿಕ್ಸೂಚಿ ವಿಬಿಜಿ ರಾಮ್​ ಜಿ

A S Patil nadahalli
A S Patil nadahalli
Published on
ಕಲಬುರಗಿ: ದೇಶದ ಪ್ರತಿ ಗ್ರಾಮ ಅಭಿವೃದ್ಧಿಯ ಮಹತ್ವಾಕಾಂಕ್ಷೆಯೊಂದಿಗೆ ಕೇಂದ್ರ ಸರ್ಕಾರ "ವಿಜಿ ರಾಮ್​ ಜಿ' ಯೋಜನೆ ಜಾರಿಗೆ ತಂದಿದ್ದು, ಗ್ರಾಮೀಣಾಭಿವೃದ್ಧಿಗೆ ಹೊಸ ದಿಕ್ಸೂಚಿಯಾಗಿದೆ ಎಂದು ಶಾಸಕ, ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್​. ಪಾಟೀಲ್​ ನಡಹಳ್ಳಿ ಹೇಳಿದರು.
ಆರು ದಶಕದಿಂದ ಹಲವು ಯೋಜನೆ ಬಂದರೂ ಹಳ್ಳಿಗಳಲ್ಲಿ ನಿರೀಕ್ಷಿತ ಪ್ರಗತಿ ಕಂಡು ಬಂದಿರಲಿಲ್ಲ. ವಿ.ಜಿ.ರಾಮ್​ ಜಿ ಯೋಜನೆ ಸಂಪೂರ್ಣ ಡಿಜಿಟಲೀಕರಣಗೊಳಿಸಲಾಗಿದೆ. ಆಧುನಿಕ ತಂತ್ರಜ್ಞಾನದ ಅಳವಡಿಕೆಯಿಂದ ಏಳು ದಿನದೊಳಗೆ ನೇರ ನಗದು ವರ್ಗಾವಣೆ ಮೂಲಕ ವೇತನ ಪಾವತಿಸಲಾಗಿದೆ. 3 ತಿಂಗಳಿಗೊಮ್ಮೆ ಆಡಿಟ್​ ಆಗಲಿದ್ದು, ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
50 ವರ್ಷದ ಹಿಂದೆ ಗ್ರಾಮೀಣ ಜನರ ಉದ್ಯೋಗ ಕ್ಕೆ ಗ್ರಾಮೀಣ ಉದ್ಯೋಗ, ರೋಜಗಾರ್​ ಆವಾಸ್​, ಕೂಲಿಗಾಗಿ ಕಾಳು ಯೋಜನೆ, ನರೇಗಾ ಸೇರಿ ಹಲವು ಹೆಸರಿನಲ್ಲಿ ಜಾರಿಗೆ ತರಲಾಗಿತ್ತು. ಎಲ್ಲವೂ ಗ್ರಾಮೀಣ ಭಾಗದ ಅಭಿವೃದ್ಧಿಗೆ ಪೂರಕವಾಗಿಲ್ಲವೆಂದು, ಮೂಲ ಸೌಕರ್ಯ, ಕೆರೆ ಕಟ್ಟೆ, ಆಸ್ಪತ್ರೆ, ಶಿಕ್ಷಣಕ್ಕಾಗಿ ವಿಬಿ ಜಿ ರಾಮ್​ ಜಿ ಯೋಜನೆ ಜಾರಿಗೆ ತರಲಾಗಿದೆ ಎಂದರು.
ಕೇಂದ್ರ ಬಜೆಟ್​ನಲ್ಲಿ ಈ ಯೋಜನೆಗೆ 95 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಒಟ್ಟು ಗ್ರಾಮೀಣಾಭಿವೃದ್ಧಿಗೆ 86 ಸಾವಿರ ಕೋಟಿ ರೂ., ಕೃಷಿ ಕ್ಷೇತ್ರಕ್ಕೆ ಒತ್ತು ನೀಡಲಾಗಿದೆ. ಸೆಮಿಕಂಡಕ್ಟರ್​ ಚಿಪ್​ ತಯಾರಿಕೆಯಲ್ಲಿ ಭಾರತ ಆತ್ಮನಿರ್ಭರವಾಗಲಿದೆ. ಅಮೆರಿಕ ಮತ್ತು ಚೀನಾದಂತಹ ದೇಶಗಳಿಗೆ ಭಾರತ ಪೈಪೋಟಿ ನೀಡುವ ಶಕ್ತಿ ಹೊಂದಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಂಸದ ಡಾ.ಉಮೇಶ ಜಾಧವ್​ ಮಾತನಾಡಿ, ಪ್ರತಿ ಜಿಲ್ಲೆಗೆ ಮಹಿಳಾ ಹಾಸ್ಟೆಲ್​, ಔಷಧ ದರ ಕಡಿತಗೊಳಿಸಲಾಗಿದೆ. ಕಲಬುರಗಿಯಲ್ಲಿ ಜವಳಿ ಪಾರ್ಕ್​ ಯೋಜನೆಗೆ ರಾಜ್ಯ ಸರ್ಕಾರ ವೇಗ ನೀಡುತ್ತಿಲ್ಲ. ಇದು ಆರಂಭವಾದರೆ ಉದ್ಯೋಗ ಸೃಷ್ಟಿಯಲ್ಲಿ ದೊಡ್ಡ ಬದಲಾವಣೆ ಬರಲಿದೆ. ರಾಜ್ಯ ಸರ್ಕಾರ ಜನರ ಹಿತ ಕಾಪಾಡಲಿ ಎಂದರು.
ಬಿಜೆಪಿ ರಾಜ್ಯ ಕಾರ್ಯದರ್ಶಿ, ಶಾಸಕ ಬಸವರಾಜ ಮತ್ತಿಮಡು, ಗ್ರಾಮಾಂತರ ಜಿಲ್ಲಾಧ್ಯಕ್ಷ ಅಶೋಕ್​ ಬಗಲಿ, ಮಹಾನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್​, ಜಿಲ್ಲಾ ಕಾರ್ಯದರ್ಶಿಗಳಾದ ಲಿಂಗರಾಜ ಬಿರಾದಾರ, ಸಂತೋಷ ಹಾದಿಮನಿ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಬಸವರಾಜ ಮಾಲಿಪಾಟೀಲ್​, ಜಿಲ್ಲಾ ವಕ್ತಾರ ಚಂದ್ರಶೇಖರ ಪರಸರೆಡ್ಡಿ, ಮುಖಂಡರಾದ ಶೋಭಾ ಬಾಣಿ, ಶಿವರಾಜ ಪಾಟೀಲ್​ ರದ್ದೇವಾಡಗಿ, ಆನಂದ ಪಾಟೀಲ್​, ನಾಗರಾಜ್​ ಮಹಾಗಾಂವಕರ್​, ಬಾಬುರಾಯ ಹಾಗರಗುಂಡಗಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net