ಕಲಬುರಗಿ: ರಾಜ್ಯ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ಸಂಚರಿಸುವ ವಾಹನಗಳ ಸಂಖ್ಯೆ ಅಳೆಯಲು 2026ನೇ ಸಾಲಿನ ರಸ್ತೆ ಸಂಚಾರ ಗಣತಿ ಹಮ್ಮಿಕೊಳ್ಳಲಾಗಿದೆ.
ಫೆಬ್ರವರಿ 26ರಂದು ಬೆಳಗ್ಗೆ 6ರಿಂದ 27ರ ಬೆಳಗ್ಗೆ 6ರವರೆಗೆ (ಸತತ 24 ಗಂಟೆ) ಕಲಬುರಗಿ ಈಶಾನ್ಯ ವಲಯದಲ್ಲಿ ಒಟ್ಟು 1062 ಗಣತಿ ಕೇಂದ್ರ ಸ್ಥಾಪಿಸಲಾಗಿದೆ. ರಾಜ್ಯ ಹೆದ್ದಾರಿಗಳಲ್ಲಿ 370 ಕೇಂದ್ರ ಮತ್ತು ಜಿಲ್ಲಾ ಮುಖ್ಯ ರಸ್ತೆಗಳಲ್ಲಿ 692 ಕೇಂದ್ರಗಳಲ್ಲಿ ಗಣತಿ ನಡೆಸಲಾಗುವುದು.
ಗಣತಿಯ ಮುಖ್ಯ ಉದ್ದೇಶ:
ಪ್ರತಿ ರಸ್ತೆಯ ಸಂಚಾರದ ಬೆಳವಣಿಗೆಯ ತೀವ್ರತೆ ಅಳೆಯುವುದು. ಅಸ್ತಿತ್ವದಲ್ಲಿರುವ ರಸ್ತೆ ದುರಸ್ತಿ ಮತ್ತು ಅವುಗಳ ಗುಣಮಟ್ಟ ಉತ್ತಮಪಡಿಸಲು ಮಾಹಿತಿ ಸಂಗ್ರಹಿಸುವುದು. ವಾಹನ ದಟ್ಟಣೆಗೆ ಅನುಗುಣವಾಗಿ ರಸ್ತೆಗಳ ಅಗಲೀಕರಣದ ಅವಶ್ಯಕತೆ ನಿರ್ಧರಿಸುವುದು. ರಸ್ತೆಗಳ ಮೇಲ್ದರ್ಜೆಗೇರಿಸುವಿಕೆಗೆ ಪೂರಕವಾದ ವರದಿ ಸಿದ್ಧಪಡಿಸುವುದು. ರಸ್ತೆ ಅಪಘಾತ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳುವುದು ಮತ್ತು ವಾಹನ ಸಂಚಾರದ ಸಾಂದ್ರತೆ ಆಧರಿಸಿ ಸರ್ಕಾರದ ಮಟ್ಟದಲ್ಲಿ ಹೊಸ ಅಭಿವೃದ್ಧಿ ಯೋಜನೆ ರೂಪಿಸುವ ಉದ್ದೇಶ ಹೊಂದಲಾಗಿದೆ.
ಈ ರಸ್ತೆ ಸಂಚಾರ ಗಣತಿ ಕಾರ್ಯವು ಯಶಸ್ವಿಯಾಗಿ ನಡೆಯಲು ವಾಹನ ಚಾಲಕರು ಮತ್ತು ಸಾರ್ವಜನಿಕರು ಗಣತಿ ಕೇಂದ್ರಗಳ ಬಳಿ ವಾಹನಗಳನ್ನು ನಿಧಾನವಾಗಿ ಚಲಿಸಿ, ಇಲಾಖೆಯೊಂದಿಗೆ ಸಹಕರಿಸುವಂತೆ ಕಲಬುರಗಿ ಲೋಕೋಪಯೋಗಿ ಇಲಾಖೆಯ ಸಂಪರ್ಕ ಮತ್ತು ಕಟ್ಟಡಗಳು (ಈಶಾನ್ಯ) ಮುಖ್ಯ ಇಂಜಿನಿಯರ್ ಕಚೇರಿ ಪ್ರಕಟಣೆ ತಿಳಿಸಿದೆ.