ಕಲಬುರಗಿ:ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಉತ್ತಮ ರಂಗಸಾಧಕರು, ಕಲಾಸಕ್ತರು ಇರುವುದರಿಂದ ಕಲಬುರಗಿ ರಂಗಾಯಣಕ್ಕೆ ಹೆಚ್ಚಿನ ಅನುದಾನ ನೀಡಿ ಸಾಂಸ್ಕೃತಿಕ ಮನೋಭೂಮಿಕೆ ಕಟ್ಟುವ ಕಾರ್ಯಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥ ಡಾ.ಸದಾನಂದ ಪೆರ್ಲ ಸಲಹೆ ನೀಡಿದರು.
ಕಲಬುರಗಿ ರಂಗಾಯಣದಲ್ಲಿ ವಿಶ್ವ ರಂಗ ನಾಟಕ ಮತ್ತು ನೃತ್ಯ ಸೇವಾ ಸಂಘ ಹಾಗೂ ರಂಗಾಯಣ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ರಂಗ ಯುಗಾದಿ ಮೂರು ದಿನಗಳ ನಾಟಕೋತ್ಸವಕ್ಕೆ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿ, ನಾಟ್ಯ ಶಾಸ್ತçದಲ್ಲಿ ಹೇಳುವಂತೆ ನಾಟಕವು ಆಂಗಿಕ, ವಾಚಿಕ, ಆಹಾರ್ಯ ಮತ್ತು ಸಾತ್ವಿಕ ಈ ನಾಲ್ಕು ಬಗ್ಗೆ ಅಭಿನಯದಿಂದ ಸಹೃದಯರ ಮನಸ್ಸಿಗೆ ಮುಟ್ಟುತ್ತದೆ. ಅದಕ್ಕಾಗಿ ರಂಗಾಯಣಕ್ಕೆ ಹೆಚ್ಚಿನ ಆರ್ಥಿಕ ನೆರವು ಒದಗಿಸಿದರೆ ಕಾಲಚಕ್ರ ದಂತಹ ಉತ್ತಮ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.
ನಾಟಕ ಕಲಾವಿದರು, ನಿರ್ದೇಶಕರು, ನಾಟಕ ರಚನೆಕಾರರಿಂದ ಸಮೃದ್ಧವಾಗಿರುವ ಈ ಭಾಗದಲ್ಲಿ ಕಲಬುರಗಿ ಆಕಾಶವಾಣಿ ನಿರ್ಮಾಣ ಮಾಡಿದ ಸಂಧ್ಯಾ ಹೊನಗುಂಟಿಕರ್ ಅವರ ಖರೇವಂದ್ರೆ ತಪ್ಪು ನಾಟಕವು ರಾಷ್ಟç ಮತ್ತು ರಾಜ್ಯಮಟ್ಟದ ಪ್ರಶಸ್ತಿ ಪಡೆಯಲು ಸಾಧ್ಯವಾಯಿತು. ರಂಗಾಯಣ ನಿರ್ಮಾಣದ ಕಾಲಚಕ್ರ ನಾಟಕ ರಾಜ್ಯದ ಹಲವೆಡೆ ಪ್ರದರ್ಶನಗೊಂಡು ಪ್ರಶಂಸೆ ಗಳಿಸಿದೆ ಎಂದರು.
ರಂಗ ಕಲಾವಿದ ಅಂಕೋಲಾ ಮೂಲದ ಗಣಪತಿ ಗೌಡ ಮಾತನಾಡಿ, ರಂಗಭೂಮಿಯನ್ನು ನಂಬಿದ ವ್ಯಕ್ತಿಯ ಬದುಕು ಈಗ ದುಸ್ತರವಾಗಿದೆ. ವೃತ್ತಿಯಾಗಿ ರಂಗಭೂಮಿಯನ್ನು ಆಯ್ಕೆ ಮಾಡಿದವರಿಗೆ ಭರವಸೆಯ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಬದಿಯ ಹೂ ಮಾರುವ, ತರಕಾರಿ ಮಾರುವವರಂತೆ ನಾಳೆಯ ಬಗ್ಗೆ ಖಾತ್ರಿ ಇಲ್ಲದ ಅತಂತ್ರತೆ ಕಾಡುತ್ತಿದೆ. ಅದಕ್ಕಾಗಿ ಸಾರ್ವಜನಿಕರ ಆರ್ಥಿಕ ನೆರವು ಮತ್ತು ಪ್ರೋತ್ಸಾಹ ಅತ್ಯಂತ ಅಗತ್ಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ರಂಗಾಯಣ ನಿರ್ದೇಶಕಿ ಡಾ.ಸುಜಾತಾ ಜಂಗಮಶೆಟ್ಟಿ ಮಾತನಾಡಿದರು. ವಿಶ್ವರಂಗ ನಾಟಕ ಮತ್ತು ನೃತ್ಯ ಸೇವಾ ಸಂಘದ ಸಂಸ್ಥಾಪಕ ವಿಶ್ವರಾಜ ಪಾಟೀಲï ಪ್ರಾಸ್ತಾವಿಕ ಮಾತನಾಡಿದರು. ರಂಗಾಯಣದ ಆಡಳಿತಾಧಿಕಾರಿ ಸಿದ್ದರಾಮ ಶಿಂಧೆ ಹಾಗೂ ವಿಶ್ವರಂಗ ನಾಟಕ ಸಂಸ್ಥೆಯ ಅಧ್ಯಕ್ಷೆ ನೀತಾ ಪಾಟೀಲï ಉಪಸ್ಥಿತರಿದ್ದರು. ನಂತರ ಟ್ಯಾಕ್ಸ್ ಫ್ರೀ ನಾಟಕ ಪ್ರದರ್ಶನಗೊಂಡಿತು. ಮಾರ್ಚ್ ೨೩ರಂದು ಕಾಲಚಕ್ರ ನಾಟಕ ಸಂಜೆ ೬.೩೦ಕ್ಕೆ ರಂಗಾಯಣದಲ್ಲಿ ಪ್ರದರ್ಶನಗೊಳ್ಳಲಿದೆ.
"
ರಂಗಾಯಣ ಚಟುವಟಿಕೆಗಳಿಗೆ ಆರ್ಥಿಕ ನೆರವು ಅಗತ್ಯವಾಗಿದ್ದು, ದಾನಿಗಳು ಮತ್ತು ಸರ್ಕಾರದ ನೆರವಿನೊಂದಿಗೆ ಉತ್ತಮ ಕೆಲಸ ನಡೆಯುತ್ತಿದೆ. ಏಳರಿಂದ ಬೇಸಿಗೆ ಶಿಬಿರ ನಡೆಯಲಿದ್ದು, ಪಾಲಕರು ಪ್ರೋತ್ಸಾಹ ನೀಡಬೇಕು.