ವಿಬಿ ಜಿ ರಾಮ್‌ ಜಿ ಹೊರಗುತ್ತಿಗೆ ನೌಕರರಿಂದ ಜಿಪಂ ಸಿಇಒ ರಾಹುಲ್ ಸಂಕನೂರ್ ಅವರಿಗೆ ಮನವಿ

ವಿಬಿ ಜಿ ರಾಮ್‌ ಜಿ ಹೊರಗುತ್ತಿಗೆ ನೌಕರರಿಂದ ಜಿಪಂ ಸಿಇಒ ರಾಹುಲ್ ಸಂಕನೂರ್ ಅವರಿಗೆ ಮನವಿ
Published on: 

ಕಲಬುರಗಿ: ವಿಬಿ ಜಿ ರಾಮ್‌ ಜಿ ಯೋಜನೆ ಅನುಷ್ಠಾನದಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ಕಳೆದ ಐದು ತಿಂಗಳುಗಳಿಂದ ವೇತನ ಪಾವತಿಯಾಗದೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಾಕಿ ಉಳಿದಿರುವ 5 ತಿಂಗಳ ವೇತನ ಹಾಗೂ ಕಳೆದ 16 ತಿಂಗಳ ಪ್ರಯಾಣ ಭತ್ಯೆಯನ್ನು (ಟಿಎ) ತಕ್ಷಣವೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಕಲಬುರಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಸಂಕನೂರ್ ಅವರಿಗೆ ವಿಬಿ -ಜಿ ರಾಮ್ ಜಿ ಜಿಲ್ಲಾ ಸಂಘದ ನೇತೃತ್ವದಲ್ಲಿ ಸೋಮವಾರ ಮನವಿ ಪತ್ರ ಸಲ್ಲಿಸಲಾಯಿತು.

ಜಿಲ್ಲೆಯ ವಿವಿಧ ತಾಲೂಕು ಹಾಗೂ ಗ್ರಾಮ ಪಂಚಾಯತಿ ಮಟ್ಟದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ನಿಯೋಜನೆಗೊಂಡಿರುವ ನೌಕರರು ಸಾರ್ವಜನಿಕ ಸೇವೆ ಮತ್ತು ಆಡಳಿತಾತ್ಮಕ ಕೆಲಸಗಳನ್ನು ನಿಷ್ಠೆಯಿಂದ ನಿರ್ವಹಿಸುತ್ತಿದ್ದಾರೆ. ಆದರೆ, ಕಳೆದ ಮೇ, ಜೂನ್, ಜುಲೈ, ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳ ವೇತನವು ಈವರೆಗೆ ಜಮೆಯಾಗಿಲ್ಲ. ಸರ್ಕಾರ ಹಾಗೂ ಇಲಾಖೆಯ ನಿಯಮಾವಳಿಗಳಿಗೆ ಬದ್ಧವಾಗಿ ಕರ್ತವ್ಯ ನಿರ್ವಹಿಸುತ್ತಿದ್ದರೂ, ಸಕಾಲದಲ್ಲಿ ವೇತನ ಪಾವತಿಯಾಗದಿರುವುದು ನೌಕರರನ್ನು ಅತಂತ್ರ ಸ್ಥಿತಿಗೆ ತಳ್ಳಿದೆ. ಇದರ ಜತೆಗೆ, ಕರ್ತವ್ಯದ ನಿಮಿತ್ತ ಗ್ರಾಮಗಳಿಗೆ ಭೇಟಿ ನೀಡಲು ತಗಲುವ ಕಳೆದ 16 ತಿಂಗಳ ಪ್ರಯಾಣ ಭತ್ಯೆಯೂ (TA) ಬಾಕಿ ಉಳಿದಿದ್ದು, ನೌಕರರು ತಮ್ಮ ಸ್ವಂತ ಜೇಬಿನಿಂದಲೇ ಹಣ ಭರಿಸಿ ಕ್ಷೇತ್ರ ಮಟ್ಟದಲ್ಲಿ ಓಡಾಡುವ ದುಸ್ಥಿತಿ ನಿರ್ಮಾಣವಾಗಿದೆ ಎಂದು ಸಂಘದ ಪದಾಧಿಕಾರಿಗಳು ಸಿಇಒ ಅವರ ಗಮನಕ್ಕೆ ತಂದರು.

ಹಲವು ತಿಂಗಳುಗಳಿಂದ ಮಾಸಿಕ ವೇತನವಿಲ್ಲದೆ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ನೌಕರರ ಕುಟುಂಬಗಳು ಬೀದಿಗೆ ಬೀಳುವಂತಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯ ಈ ಸಂದರ್ಭದಲ್ಲಿ ಮನೆ ಬಾಡಿಗೆ ಪಾವತಿಸಲು ಸಾಧ್ಯವಾಗುತ್ತಿಲ್ಲ, ಮಕ್ಕಳ ಶಾಲಾ-ಕಾಲೇಜುಗಳ ಶುಲ್ಕ ತುಂಬಲು ಹಣವಿಲ್ಲದೆ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ. ದಿನಸಿ ಸಾಮಗ್ರಿ, ಹಾಲು, ವಿದ್ಯುತ್ ಬಿಲ್ ಹಾಗೂ ತುರ್ತು ಆಸ್ಪತ್ರೆ ವೆಚ್ಚಗಳಿಗೂ ಪರದಾಡುವಂತಾಗಿದ್ದು, ಕುಟುಂಬ ನಿರ್ವಹಣೆಗಾಗಿ ಸಾಲದ ಸುಳಿಗೆ ಸಿಲುಕಬೇಕಾಗಿದೆ ಎಂದು ನೌಕರರು ಅಳಲು ತೋಡಿಕೊಂಡರು.

ಪ್ರಸ್ತುತ ಸಾಲು ಸಾಲು ಸಾಂಪ್ರದಾಯಿಕ ಹಬ್ಬಗಳು ಸಮೀಪಿಸುತ್ತಿದ್ದು, ಕುಟುಂಬದ ಅಗತ್ಯ ಖರ್ಚುಗಳನ್ನು ಸರಿದೂಗಿಸಲು ಹಣದ ಅವಶ್ಯಕತೆ ಅತ್ಯಂತ ತುರ್ತಾಗಿದೆ. ವೇತನವಿಲ್ಲದೆ ಹಬ್ಬಗಳನ್ನು ಆಚರಿಸುವುದಿರಲಿ, ನಿತ್ಯದ ಊಟಕ್ಕೂ ಕಷ್ಟಪಡುವಂತಹ ಅನಿವಾರ್ಯತೆ ಸೃಷ್ಟಿಯಾಗಿದೆ. ಆದ್ದರಿಂದ ಜಿಲ್ಲಾ ಪಂಚಾಯತ್ ಆಡಳಿತವು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಸಂಬಂಧಪಟ್ಟ ಅನುಷ್ಠಾನ ಅಧಿಕಾರಿಗಳು ಹಾಗೂ ಏಜೆನ್ಸಿಗಳಿಗೆ ಸ್ಪಷ್ಟ ನಿರ್ದೇಶನ ನೀಡಬೇಕು. ಮಾನವೀಯ ನೆಲೆಯಲ್ಲಿ ಬಾಕಿ ಇರುವ ಐದು ತಿಂಗಳ ಸಂಪೂರ್ಣ ವೇತನ ಮತ್ತು 16 ತಿಂಗಳ ಪ್ರಯಾಣ ಭತ್ಯೆಯನ್ನು ವಿಳಂಬವಿಲ್ಲದೆ ಬಿಡುಗಡೆಗೊಳಿಸಿ ನೌಕರರ ಹಿತರಕ್ಷಣೆ ಮಾಡಬೇಕೆಂದು ಸಂಘವು ಲಿಖಿತ ಮನವಿಯ ಮೂಲಕ ಒತ್ತಾಯಿಸಿತು.

ಮನವಿ ಸ್ವೀಕರಿಸಿದ ಸಿಇಒ ರಾಹುಲ್ ಸಂಕನೂರ್ ಅವರು, ಈ ಕುರಿತು ಪರಿಶೀಲನೆ ನಡೆಸಿ ನಿಯಮಾನುಸಾರ ಬಾಕಿ ಮೊತ್ತವನ್ನು ತ್ವರಿತವಾಗಿ ವಿತರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ವಿಬಿ-ಜಿರಾಮ್- ಜಿ ಯೋಜನೆ ಜಿಲ್ಲಾ ಸಂಘದ ಅಧ್ಯಕ್ಷ ಜಗದೀಶ ಎಸ್ ಮೇಗಪ್ಪಿ, ಉಪಾಧ್ಯಕ್ಷ ಜ್ಯೋತಿ ಸಾಗರ, ಇರ್ಫಾನ ಜಾಗೀರದಾರ, ಸಚೀನ ಲೊಂಡೆ, ರಾಜ್ಯ ಮಟ್ಟದ ಪ್ರತಿನಿಧಿ ಅನೀಲ ರಾಠೋಡ, ಖಜಾಂಚಿ ಸಂದೀಪ ಪಾಟೀಲ್, ಎಡಿಪಿಸಿ, ಡಿಐಸಿ, ತಾಂತ್ರಿಕ ಸಂಯೋಜಕರು, ಎಂಐಎಸ್ ಸಂಯೋಜಕರು, ಐಇಸಿ ಸಂಯೋಜಕರು, ತಾಂತ್ರಿಕ ಸಹಾಯಕರು, ಡಿಇಓ ಸೇರಿದಂತೆ

ಸಂಘದ ಪದಾಧಿಕಾರಿಗಳು ಹಾಗೂ ಎಲ್ಲ ನೌಕರರು ಉಪಸ್ಥಿತರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net