ಗುಲ್ಬರ್ಗ ವಿವಿ ಗ್ರಂಥಾಲಯದಲ್ಲಿ ಇತ್ತೀಚಿಗೆ ಆಯೋಜಿಸಿದ್ದ ಗ್ರಂಥಾಲಯ ಸಂಘದ ಜಿಲ್ಲಾ ಘಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ರಾಜ್ಯ ಅಧ್ಯಕ್ಷ ಡಾ.ಎಸ್.ಎಲ್.ಕಾಡದೇವರಮಠ್ ಅವರನ್ನು ಪ್ರೊ.ಡಿ.ಬಿ.ಪಾಟೀಲ್ ಸತ್ಕರಿಸಿದರು. ಡಾ.ಸುರೇಶ ಜಂಗೆ, ಡಾ.ಸಾವಿತ್ರಿ ಕೃಷ್ಣ, ಡಾ.ದಾನಪ್ಪ ವಗ್ಗಿ, ಡಾ.ಗಣಪತಿ ಸಿಂಧೆ ಇತರರಿದ್ದರು.
ಕಲಬುರಗಿ:ಪ್ರಸ್ತುತ ಗ್ರಂಥಾಲಯಗಳು ತಂತ್ರಜ್ಞಾನದ ನೆರವಿನಿಂದ ಡಿಜಿಟಲ್ ಸಂಪನ್ಮೂಲ ಕೇಂದ್ರಗಳಾಗಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಗುರಿ ಸಾಧನೆ ಮತ್ತು ಬೌದ್ಧಿಕ ಜ್ಞಾನಾರ್ಜನೆಗೆ ಮುಕ್ತ ಅವಕಾಶ ನೀಡುತ್ತವೆ. ಓದುವ ಹವ್ಯಾಸ ಮತ್ತು ಜ್ಞಾನ ಹಂಚಿಕೆಗೆ ಸಹಾಯಕವಾಗಿವೆ ಎಂದು ಎಂದು ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘದ ಅಧ್ಯಕ್ಷ ಡಾ.ಎಸ್.ಎಲ್.ಕಾಡದೇವರಮಠ ಹೇಳಿದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಸಭಾಂಗಣದಲ್ಲಿ ಇತ್ತೀಚಿಗೆ ಆಯೋಜಿಸಿದ್ದ ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘದ ಕಲಬುರಗಿ ಜಿಲ್ಲಾ ಘಟಕದ ಉದ್ಘಾಟನೆ, ಕಲ್ಯಾಣ ಕರ್ನಾಟಕ ಗ್ರಂಥಪಾಲಕರ ಸಂಘಕ್ಕೆ ಆಯ್ಕೆಯಾಗಿರುವ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಪ್ರಮಾಣವಚನ ಬೋಧನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವಿಶ್ವವಿದ್ಯಾಲಯ, ಕಾಲೇಜು ಶೈಕ್ಷಣಿಕ ಬೆಳವಣಿಗೆಗೆ ಗ್ರಂಥಾಲಯಗಳು ಮಹತ್ವದ ಪಾತ್ರವಹಿಸುತ್ತಿವೆ. ಗ್ರಂಥಾಲಯ ಮತ್ತು ಗ್ರಂಥಪಾಲಕರ ಹುದ್ದೆ ಅಗತ್ಯತೆ ಸರ್ಕಾರ ಮನಗಾಣಬೇಕಿದೆ. ಪ್ರಸ್ತುತ ಸುಮಾರು ೨೦೦೦ ಪದವಿ ಪೂರ್ವ ಕಾಲೇಜುಗಳ ಪೈಕಿ ಕೇವಲ ೯೦ ಕಾಲೇಜುಗಳಲ್ಲಿ ಮಾತ್ರ ಗ್ರಂಥಪಾಲಕರಿದ್ದಾರೆ. ೨೦೧೦ ರಿಂದಲೂ ಪದವಿ ಕಾಲೇಜುಗಳಲ್ಲಿರುವ ಗ್ರಂಥಪಾಲಕರ ಹುದ್ದೆಗಳನ್ನು ಸರ್ಕಾರ ಈವರೆಗೂ ಭರ್ತಿ ಮಾಡಿಲ್ಲ ಎಂದು ವಿಷಾದಿಸಿದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಗ್ರಂಥಪಾಲಕ ಡಾ.ಸುರೇಶ್ ಜಂಗೆ ಮಾತನಾಡಿ, ಗ್ರಂಥಾಲಯ ವೃತ್ತಿಪರರು ಗ್ರಂಥಾಲಯ ಕ್ಷೇತ್ರದ ನಾವೀನ್ಯತೆ ಮತ್ತು ತಂತ್ರಜ್ಞಾನ ಕೌಶಲ ರೂಢಿಸಿಕೊಂಡು ವಿದ್ಯಾರ್ಥಿಗಳ ಬೆಳವಣಿಗೆಗೆ ಪ್ರೋತ್ಸಾಹ ನೀಡಬೇಕು. ಹೊಸ ಹೊಸ ವಿಷಯ, ಸಂಶೋಧನಾ ಕ್ಷೇತ್ರದ ಪ್ರಕಟಿತ ನಿಯತಕಾಲಿಕೆ, ಆನ್‌ಲೈನ್ ಸೇವೆ ಮೂಲಕ ಓದುಗರ ಮತ್ತು ವಿದ್ಯಾರ್ಥಿಗಳನ್ನು ಅಧ್ಯಯನದ ಕಡೆಗೆ ಒಲವು ಮೂಡಿಸಬೇಕೆಂದು ಗ್ರಂಥಾಲಯದ ಮಹತ್ವ ವಿವರಿಸಿದರು.
ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಡಿ.ಬಿ.ಪಾಟೀಲ್ ಮಾತನಾಡಿ, ಗ್ರಂಥಾಲಯ ಮತ್ತು ಗ್ರಂಥಪಾಲಕರ ವೈಯಕ್ತಿಕ ಜವಾಬ್ದಾರಿಗಳು, ಗುರಿ ಮತ್ತು ಸಾಧನೆ, ಕಾರ್ಯನಿರತ ಗ್ರಂಥಪಾಲಕರ ಕೌಶಲಾಭಿವೃದ್ಧಿಗಾಗಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿಚಾರ ಸಂಕಿರಣ ಮತ್ತು ಕಾರ್ಯಾಗಾರ ಆಯೋಜಿಸಬೇಕು ಎಂದರು.
ಕಲಬುರಗಿ ಜಿಲ್ಲಾ ಘಟಕದ ನೂತನ ಅಧ್ಯಕ್ಷೆ ಡಾ.ಸಾವಿತ್ರಿ ಕೃಷ್ಣ ಮಾತನಾಡಿ, ಗ್ರಂಥಾಲಯ ವೃತ್ತಿಪರರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತೇನೆ. ಹಿರಿಯರ ಸಲಹೆ ಮತ್ತು ಎಲ್ಲರ ಸಹಕಾರದೊಂದಿಗೆ ವಿವಿಧ ಚಟುವಟಿಕೆ ಕೈಗೊಳ್ಳಲಾಗುವುದು ಎಂದರು.
ನಿವೃತ್ತ ಗ್ರಂಥಪಾಲಕ ಡಾ.ಗಣಪತಿ ಸಿಂಧೆ ಇತರರಿದ್ದರು. ಡಾ.ರಾಜಶ್ರೀ ಸ್ವಾಗತಿಸಿದರು. ಡಾ.ದಾನಪ್ಪ ವಗ್ಗಿ ನಿರೂಪಿಸಿದರು. ಡಾ. ಸಾವಿತ್ರಿ ಪಟ್ಟಣ ವಂದಿಸಿದರು. ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಅತಿಥಿ ಉಪನ್ಯಾಸಕರು, ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ ಇದ್ದರು.
ಸಂಘದ ಪದಾಧಿಕಾರಿಗಳು
ಡಾ. ಸುರೇಶ ಜಂಗೆ (ಸಲಹೆಗಾರ) ಡಾ.ಸಾವಿತ್ರಿ ಕೃಷ್ಣ (ಅಧ್ಯಕ್ಷೆ ), ಡಾ.ಗೌತಮಿ ಮತ್ತು ಡಾ.ಫರಹೀನ್ (ಉಪಾಧ್ಯಕ್ಷರು), ಡಾ. ದಾನಪ್ಪ ವಗ್ಗಿ (ಕಾರ್ಯದರ್ಶಿ), ಡಾ.ಸಾವಿತ್ರಿ ಪಟ್ಟಣ (ಸಂಘಟನಾ ಕಾರ್ಯದರ್ಶಿ), ಡಾ ರಾಜಶ್ರೀ (ಖಜಾಂಚಿ), ಆಡಳಿತ ಮಂಡಳಿ ಸದಸ್ಯರಾಗಿ ಡಾ. ಅರವಿಂದ, ಡಾ ವಿನೋದಕುಮಾರ, ಡಾ.ಸೈಯದ್ ಸರಮಸ್ತ್, ಡಾ.ಪ್ರತಿಭಾ, ಡಾ.ನಾಗರಾಜ ಮತ್ತು ಭೀಮರೆಡ್ಡಿ ಅವರನ್ನು ಆಯ್ಕೆ ಮಾಡಲಾಯಿತು.
"
ರಾಜ್ಯದ ಶಾಲಾ ಕಾಲೇಜು, ವಿಶ್ವವಿದ್ಯಾಲಯ ಮತ್ತು ಸಾರ್ವಜನಿಕ ಗ್ರಂಥಾಲಯಗಳಲ್ಲಿ ಸಾವಿರಾರು ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡುವಂತೆ ಒತ್ತಾಯಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.ಡಾ.ಎಸ್.ಎಲ್.ಕಾಡದೇವರಮಠ್, ಅಧ್ಯಕ್ಷ, ರಾಜ್ಯ ಗ್ರಂಥಾಲಯ ಸಂಘ.