

ಕಾಳಗಿ: ಭಾರತೀಯ ಪರಂಪರೆ, ಸಂಸ್ಕೃತಿ, ಧಾರ್ಮಿಕ ಆಚರಣೆಗಳಿಗೆ ಮೆರಗು ಬರಬೇಕಾದರೆ ನಾವೆಲ್ಲರೂ ಒಗ್ಗಟ್ಟಾಗಿ ಹಬ್ಬಗಳನ್ನು ಆಚರಿಸಬೇಕು. ಇದು ದೇಶದ ಐಕ್ಯತೆಗೆ ಪೂರಕವಾಗಲಿದೆ ಎಂದು ಮಾಜಿ ಸಂಸದ ಡಾ.ಉಮೇಶ ಜಾಧವ್ ಹೇಳಿದರು.
ಶ್ರೀ ನೀಲಕಂಠ ಕಾಳೇಶ್ವರ ದೇವಸ್ಥಾನದಲ್ಲಿ ಹಿಂದೂ ಮಹಾಗಣಪತಿಯಿಂದ ಮಂಗಳವಾರ ಸಂಜೆ ಆಯೋಜಿಸಿದ್ದ ಹಾಸ್ಯಸಂಜೆ ಕಾರ್ಯಕ್ರಮದಲ್ಲಿ ಮಾತನಾಡಿ, ಧಾರ್ಮಿಕ ಕಾರ್ಯಕ್ರಮಗಳು ತಮ್ಮದೇ ಮಹತ್ವ ಪಡೆದಿದ್ದು, ಅದನ್ನು ಅರಿತು ಅರ್ಥಪೂರ್ಣ ಹಾಗೂ ಸಂಭ್ರಮದಿಂದ ಹಬ್ಬಗಳನ್ನು ಆಚರಿಸಬೇಕು. ನಾವೆಲ್ಲ ಹಿಂದೂ, ನಾವೆಲ್ಲ ಒಂದು ಎಂದು ಸಾರಬೇಕು ಎಂದು ಕರೆ ನೀಡಿದರು.
ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ ಮಾತನಾಡಿ, ನಮ್ಮ ಸುತ್ತಮುತ್ತ ನಡೆಯುವ ಟನಾವಳಿಗಳು ಸೂಕ್ಷ್ಮವಾಗಿ ಅವಲೋಕಿಸಿದಾಗ ಹಾಸ್ಯ ಕಂಡು ಬರುತ್ತದೆ. ಇದನ್ನೆ ಬೀಚಿ ಅವರು ತಮ್ಮ ಕೃತಿಗಳಲ್ಲಿ ಬರೆದಿದ್ದಾರೆ ಎಂದು ತಿಳಿಸಿದರು.
ಸುಗೂರಿನ ಶ್ರೀ ಚನ್ನರುದ್ರಮುನಿ ಶಿವಾಚಾರ್ಯರು ಸಾನ್ನಿಧ್ಯವಹಿಸಿದ್ದರು. ಸಮಿತಿ ಅಧ್ಯಕ್ಷ ಪುರುಷೋತ್ತಮ ಗುತ್ತೇದಾರ್, ಪ್ರಮುಖರಾದ ಪ್ರಶಾಂತ ಕದಂ, ರಮೇಶ ಕಿಟ್ಟದ, ಸಂತೋಷ ಪಾಟೀಲ್, ವಿಶ್ವನಾಥ ವನಮಾಲಿ, ಶಿವಶರಣಪ್ಪ ಕಮಲಾಪುರ, ಮಲ್ಲಿನಾಥ ಪಾಟೀಲ್, ರಾಮಕುಮಾರ ಕೋಲ್ಕುಂದಿ, ರಾಮರಾವ ಪಾಟೀಲ್, ಚಂದ್ರಕಾಂತ ವನಮಾಲಿ, ಶೇಖರ ಮಾಲಿಪಾಟೀಲ್, ಜಗನ್ನಾಥ ಚಂದನಕೇರಿ, ಶರಣು ಚಂದಾ, ಜಗನ್ನಾಥ ತೇಲಿ, ಶರಣು ಸಾಲಿಮಠ, ಶಿವಕುಮಾರ ಕಮಕನೂರ ಇತರರಿದ್ದರು.
ಹಾಸ್ಯ ಕಲಾವಿದರಾದ ಗಂಗಾವತಿ ಪ್ರಾಣೇಶ, ಬಸವರಾಜ ಮಹಾಮನಿ, ನರಸಿಂಹ ಜೋಶಿ ಅವರು ಹಾಸ್ಯಚಟಾಕಿ ಹಾರಿಸಿ ಜನರನ್ನು ನಗೆ ಹೊನಲಿನಲ್ಲಿ ತೇಲಿಸಿದರು.
ಗಣೇಶೋತ್ಸವ ಅದ್ದೂರಿಯಿಂದ ಆಚರಿಸುತ್ತಿರುವಾಗ ಏಕಾಏಕಿ ಮಳೆರಾಯನ ಆಗಮನವಾಯಿತು. ಈ ವೇಳೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ನೂರಾರು ಜನರು ಚೇರ್ಗಳನ್ನೇ ತಲೆ ಮೇಲೆ ಹೊತ್ತು ಹಾಸ್ಯ ಸಂಜೆ ವೀಕ್ಷಿಸಿದರು. ಇದರಿಂದ ಕಲಾವಿದರು ಇನ್ನಷ್ಟು ಸಂತಸದಿಂದ ಸಾರ್ವಜನಿಕರಿಗೆ ಹಾಸ್ಯದ ಮಳೆ ಸುರಿಸಿದರು.