ಕಲಬುರಗಿ:ಬಸವ ಜಯಂತಿ ನಿಮಿತ್ತ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಏ.೧೯ರಂದು ಬೆಳಗ್ಗೆ ೧೦.೪೫ಕ್ಕೆ ನಗರದ ಕನ್ನಡ ಭವನದಲ್ಲಿ ಬಸವ ಪರ್ವ-೨೦೨೬ ಎಂಬ ಇವ ನಮ್ಮವನಾಗಿಸುವ ಹಬ್ಬದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ತಿಳಿಸಿದ್ದಾರೆ.
ನಗರದ ಕನ್ನಡ ಭವನದಲ್ಲಿ ಗುರುವಾರ ಜರುಗಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಕತ್ತಲು ಕವಿದಂತಿರುವ ಇಂದಿನ ಸಮಾಜವನ್ನು ಸಮಾನತೆ, ಸೌಹಾರ್ದತೆ ಮತ್ತು ಸಮೃದ್ಧಿಯ ಬೆಳಕಿನೆಡೆಗೆ ಕೊಂಡೊಯ್ಯುವುದು ಬಸವಾದಿ ಶರಣರ ಚಿಂತನೆಗಳಿAದ ಮಾತ್ರ ಸಾಧ್ಯ ಎಂದು ಹೇಳಿದರು.
ಉತ್ತರ ಕನ್ನಡ ಜಿಲ್ಲೆಯ ಅತ್ತಿವೇರಿ ಬಸವ ಧಾಮದ ಶ್ರೀ ಬಸವೇಶ್ವರಿ ಮಾತಾಜೀ ದಿವ್ಯ ನೇತೃತ್ವದಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ಸಮಾರಂಭ ಉದ್ಘಾಟಿಸಲಿದ್ದಾರೆ. ಬಸವ ಜಯಂತ್ಯುತ್ಸವ ಸಮಿತಿ ಮಾಜಿ ಅಧ್ಯಕ್ಷ ರವಿ ಬಿರಾದಾರ ಕಮಲಾಪುರ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ವಡ್ಡನಕೇರಿ, ಅಫಜಲಪುರ ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಬಸಣ್ಣ ಗುಣಾರಿ, ಸಾಹಿತ್ಯ ಪ್ರೇರಕಿ ರಾಜೇಶ್ವರಿ ಸಾಹು ಮುಖ್ಯ ಅತಿಥಿಗಳಾಗಿದ್ದಾರೆ.
ಸಭೆಯಲ್ಲಿ ಶಕುಂತಲಾ ಪಾಟೀಲ,ಧರ್ಮಣ್ಣ ಧನ್ನಿ, ಧರ್ಮರಾಜ ಜವಳಿ, ಸೈಯ್ಯದ್ ನಜಿರುದ್ದಿನ್ ಮುತ್ತವಲ್ಲಿ, ಶರಣರಾಜ ಛಪ್ಪರಬಂದಿ, ರವಿ ಶಹಾಪೂರಕರ್, ಜ್ಯೋತಿ ಕೋಟನೂರ, ಜಯಶ್ರೀ ಜಮಾದಾರ, ಡಾ.ರೆಹಮಾನ್ ಪಟೇಲ್ ಇತರರಿದ್ದರು.
ದಂಪತಿಗಳಿಗೆ ಪುರಸ್ಕರಿಸಿ ಸತ್ಕಾರ
ಸಮಾರಂಭದಲ್ಲಿ ಶರಣ ದಂಪತಿಗಳಾದ ಶಶಿಕಲಾ ಶಿವಪ್ಪ ತಳಕಿನ್ ಮಳಖೇಡ, ಶಕುಂತಲಾ ಯಶ್ವಂತರಾವ ಪಾಟೀಲ ಜಾವಳಿ, ಕಲ್ಪನಾ ಅಣ್ಣಾರಾವ ಪೆದ್ದಿ ಕೋಡ್ಲಿ, ಮಹಾದೇವಿ ಡಾ.ಕೆ.ಎಸ್. ಬಂಧು, ನಿರ್ಮಲಾ ಸಿದ್ದಣ್ಣ ಬೆಡಸೂರ ಸೇಡಂ, ನಂದಿನಿ ವಿಶ್ವಾರಾಧ್ಯ ಬಿರಾಳ ಶಹಾಬಾದ, ಪ್ರೀತಿ ಬಸವರಾಜ ಬಿರಾದಾರ್ ಸೊನ್ನ, ರೇಣುಕಾ ರಾಮು ರೆಡ್ಡಿ ಗುಮ್ಮಟ ಅವರಿಗೆ ಬಸವ ಪುರಸ್ಕಾರ ನೀಡಿ ಸತ್ಕರಿಸಲಾಗುವುದು. ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ವಚನ ಪ್ರಿಯರಿಗೆ ಕಾಯಕ ಪ್ರಿಯ ಗೌರವ ಪುರಸ್ಕಾರ ನೀಡಿ ಗೌರವಿಸಲಾಗುವುದು.
"
ಗಂಡ ತೀರಿದ ಮಹಿಳೆಯನ್ನು ಗಂಗಾದೇವಿ ಎಂದು ಕರೆಯಬೇಕೆಂಬ ಜನಪದರ ಮಾತಿನಂತೆ, ವಿಧವಾ ತಾಯಂದಿಯರಿಗಾಗಿ ಗಂಗಾ ಭಾಗೀರಥಿ ತವರಿನುಡುಗೊರೆ ಸ್ಪೂರ್ತಿ ಎಂಬ ಕಾರ್ಯಕ್ರಮ ರೂಪಿಸಲಾಗಿದೆ.