ಅಯ್ಯನ ಕಥೆಗಳು ಪುಸ್ತಕ ವಿತರಣಾ ಅಭಿಯಾನ : ಡಾ. ಸ್ವಾಮಿರಾವ್ ಅಭಿಮತ

ಪುಸ್ತಕಗಳಿಂದ ಜೀವಂತ ಆದರ್ಶದ ಪಾಠ
ಅಯ್ಯನ ಕಥೆಗಳು ಪುಸ್ತಕ ವಿತರಣಾ ಅಭಿಯಾನ :  ಡಾ. ಸ್ವಾಮಿರಾವ್  ಅಭಿಮತ
Published on: 

ಕಲಬುರಗಿ: ಪುಸ್ತಕಗಳು ಸಂಸ್ಕಾರ ಸಂಸ್ಕೃತಿಯನ್ನು ನೀಡಿ ವ್ಯಕ್ತಿಯನ್ನು ಸಾಧಕನನ್ನಾಗಿ ಮಾಡುವುದರೊಂದಿಗೆ ಜೀವಂತ ಆದರ್ಶ ಪಾಠ ಕಲಿಸಿಕೊಡುತ್ತದೆ ಎಂದು ಹಿರಿಯ ಸಾಹಿತಿ ಮತ್ತು ಚಿಂತಕರಾದ ಡಾ. ಸ್ವಾಮಿರಾವ್ ಕುಲಕರ್ಣಿ ಅಭಿಪ್ರಾಯ ಪಟ್ಟರು. ಕಲಬುರಗಿಯ ರಾಮಮಂದಿರದ ಸಮೀಪದ ವಿವೇಕಾನಂದ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೆಪ್ಟೆಂಬರ್ 24ರಂದು ಶ್ರೀಮತಿ ಬಾಲಮ್ಮ ಮಹಾದೇವಪ್ಪ ಕಡೇಚೂರ್ ಟ್ರಸ್ಟ್ ವತಿಯಿಂದ ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟಗಾರ ಸಾಹಿತಿ ದಿ. ಮಹಾದೇವಪ್ಪ ಕಡೇಚೂರ್ ಅವರು ಬರೆದ "ಅಯ್ಯನ ಕಥೆಗಳು" ಪುಸ್ತಕ ವಿತರಣಾ ಅಭಿಯಾನದ ಮೂರನೇ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಹೈದರಾಬಾದ್ ಕರ್ನಾಟಕ ವಿಮೋಚನ ಹೋರಾಟಗಾರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸಾಹಿತಿ ಮಹಾದೇವಪ್ಪ ಕಡೇಚೂರ್ ಅವರ ಚಿಂತನೆಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುವಅಭಿಯಾನದ ಕಾರ್ಯ ಶ್ಲಾಘನೀಯವಾದುದು.

ಪುಸ್ತಕಗಳು ಬಾಳಿಗೆ ದಾರಿ ದೀಪ ಹಾಗೂ ಓದಿನ ಬದುಕು ಬದಲಾಯಿಸಿದ ಜ್ವಲತ ಘಟನೆಗಳಿವೆ. ಪುಸ್ತಕಗಳು ಜೀವನಕ್ಕೆ ಸದಾ ತೆರೆದ ಬಾಗಿಲುಗಳಾಗಿರುತ್ತವೆ. ನೋವು, ಬಡತನ ದೌರ್ಬಲ್ಯದಿಂದ ಹೊರಬರಲು ಪುಸ್ತಕಗಳು ಜೀವನಕ್ಕೆ ಒಳ್ಳೆಯದನ್ನೇ ಮಾಡುತ್ತದೆ. ಪಠ್ಯೇತರ ಚಟುವಟಿಕೆ ಕಡಿಮೆಯಾಗಿ ಕ್ರಿಯಾಶೀಲತೆ ಕುಗ್ಗುತ್ತಿದೆ.ಸಂಗೀತ, ನಾಟಕ, ಭಾಷಣ,ಕ್ರೀಡೆ ಮುಂತಾದ ಕ್ಷೇತ್ರಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಿ ಎಂದು ಸಲಹೆಯಿತ್ತರು.

ದಿ. ಮಹಾದೇವಪ್ಪ  ಕಡೇಚೂರ್
ದಿ. ಮಹಾದೇವಪ್ಪ ಕಡೇಚೂರ್

ಪುಸ್ತಕ ಅಭಿಯಾನ ಕ.ಕ ಕ್ಕೆ ವಿಸ್ತರಿಸಿ

ಟ್ರಸ್ಟ್ ವತಿಯಿಂದ ನಡೆಸುವ ಪುಸ್ತಕ ವಿತರಣಾ ಅಭಿಯಾನವನ್ನು ಕಲ್ಯಾಣ ಕರ್ನಾಟಕಕ್ಕೆ ವಿಸ್ತರಿಸಿ ಓದುವ ಹವ್ಯಾಸ ಹೆಚ್ಚಿಸಬೇಕು. ಶ್ರೇಷ್ಠ ವ್ಯಕ್ತಿ ಮಹಾದೇವಪ್ಪ ಕಡೇಚೂರ್ ಅವರ ಬದುಕು ಬರಹ ಆದರ್ಶಗಳಿಂದ ಕೂಡಿದ್ದು ಜೀವನಕ್ಕೆ ಸ್ಫೂರ್ತಿ ನೀಡುತ್ತದೆ ಎಂದು ಹಿರಿಯ ಪತ್ರಕರ್ತರಾದ ಬಾಬುರಾವ್ ಯಡ್ರಾಮಿ ತಿಳಿಸಿದರು. ಸ್ವಾತಂತ್ರ್ಯ ಹೋರಾಟಗಾರರು, ತಂದೆ ಮತ್ತು ತಾಯಿ ಹಾಗೂ ಗುರುಗಳನ್ನು ಮಾದರಿಯಾಗಿಟ್ಟುಕೊಂಡರೆ ಭವಿಷ್ಯದಲ್ಲಿ ಶ್ರೇಷ್ಠ ವ್ಯಕ್ತಿಗಳಾಗಿ ಸಾಧನೆ ಮಾಡಲು ಸಾಧ್ಯ. ಮೊಬೈಲ್ ಬಳಕೆd ಇತಿಮಿತಿ ಹಾಕಿ ಅಧ್ಯಯನಶೀಲರಾಗುವಂತೆ ವಿದ್ಯಾರ್ಥಿಗಳಿಗೆ ಅವರು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಿವೇಕಾನಂದ ವಿದ್ಯಾನಿಕೇತನ ಸಂಸ್ಥೆಯ ಪ್ರಾಂಶುಪಾಲರಾದ ಸಿದ್ದಪ್ಪ ಭಗವತಿ ಮಾತನಾಡಿ ಉತ್ತಮ ಕೃತಿ ಹಾಗೂ ಉತ್ತಮ ಸಾಧಕರನ್ನು ಪರಿಚಯಿಸುವ ಈ ಅಭಿಯಾನ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುತ್ತದೆ ಎಂದರು. ಕಾರ್ಯಕ್ರಮದಲ್ಲಿ ಟ್ರಸ್ಟ್ ನ ಸದಸ್ಯ ಮಹೇಶ್ ಕಡೇಚೂರ್ ಅತಿಥಿಗಳಿಗೆ ಶಾಲು ಕೃತಿ ಮತ್ತು ಪುಷ್ಪ ನೀಡಿ ಗೌರವಿಸಿದರು.

ಆಕಾಶವಾಣಿಯ ವಿಶ್ರಾಂತ ಕಾರ್ಯಕ್ರಮ ಮುಖ್ಯಸ್ಯರಾದ ಡಾ ಸದಾನಂದ ಪೆರ್ಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಮೂರನೇ ಪುಸ್ತಕ ವಿತರಣಾ ಅಭಿಯಾನ ಕೂಡಾ ಯಶಸ್ವಿಯಾಗಿದ್ದು ಪ್ರತಿ ತಿಂಗಳ 24 ನೇ ದಿನಾಂಕದಂದು ಶಾಲಾ ಗ್ರಂಥಾಲಯಕ್ಕೆ ಪುಸ್ತಕ ವಿತರಿಸುವ ಯೋಜನೆ ಮುಂದುವರೆಯುತ್ತಿದೆ ಎಂದು ಹೇಳಿದರು. ವಿದ್ಯಾರ್ಥಿನಿ ಅನನ್ಯ ಪ್ರಾರ್ಥನೆ ಗೀತೆ ಹಾಡಿದರು. ವಿದ್ಯಾರ್ಥಿನಿಯರಾದ ಸಾನ್ವಿ ಕುಲಕರ್ಣಿ ಕಾವ್ಯ ಬಸಮೆ ಮತ್ತು ಅನುಷಾ ಆನಂದ್ ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕಿ ರತ್ನಾ ಅಳ್ಳದ್ ಧನ್ಯವಾದವಿತ್ತರು. ನಂತರ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net