ಲಂಚ ಕೊಡಲು ಯತ್ನಿಸಿದವರ ಬಂಧನ: ಸರ್ಕಾರಿ ಅಭಿಯೋಜಕರಿಗೆ ಆಮಿಷ

lokayukth trap
lokayukth trap
Published on

ಪ್ರಮುಖ ಮುಖ್ಯಾಂಶಗಳು

  • 5 ಸಾವಿರ ಹಣ ಕೊಡಲು ಯತ್ನಿಸಿದ್ದ ವೇಳೆ ಬಂಧನ
ಕಲಬುರಗಿ: ಎಸ್​ಸಿ, ಎಸ್​ಟಿ ಪ್ರಕರಣವೊಂದರಲ್ಲಿ ಆರೋಪಿತನಿಗೆ ಅನುಕೂಲವಾಗುವಂತೆ ನ್ಯಾಯಾಲಯದ ವಿಚಾರಣೆ ತಮ್ಮ ಪರವಾಗುವಂತೆ ಮಾಡಲು ಸರ್ಕಾರಿ ಅಭಿಯೋಜಕರಿಗೆ 5,000 ರೂ. ಲಂಚ ನೀಡಲು ಯತ್ನಿಸಿದ ತಂದೆ ಮತ್ತು ಮಗನನ್ನು ಲೋಕಾಯುಕ್ತ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಆಳಂದ ತಾಲೂಕಿನ ಕೋತನಹಿಪ್ಪರಗಾದ ಆರೋಪಿಯ ಸಹೋದರ ಸಂಜೀವನ್​ ದತ್ತಾಜಿ ಪಾಟೀಲ್​(80) ಹಾಗೂ ಅವರ ಪುತ್ರ ಸುರೇಶ ಸಂಜೀವನ್​ ಪಾಟೀಲ್​(44) ಬಂಧಿತರು. ಆಳಂದ ಪೊಲೀಸ್​ ಠಾಣೆ ವ್ಯಾಪ್ತಿಯ ಎಸ್​ಸಿ, ಎಸ್​ಟಿ ಪ್ರಕರಣವೊಂದು ಕಲಬುರಗಿಯ 2ನೇ ಅಪರ ಜಿಲ್ಲಾ ಮತ್ತು ಸತ್ರ (ಎಸ್​ಸಿ, ಎಸ್​ಟಿ) ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.
ಪ್ರಕರಣದಲ್ಲಿನ ಆರೋಪಿಗೆ ಸಹಾಯ ಮಾಡುವ ಉದ್ದೇಶದಿಂದ ಹಾಗೂ ಪ್ರಕರಣದ ವಿಚಾರಣೆ ವಿಳಂಬದ ಪ್ರಯತ್ನದ ಭಾಗವಾಗಿ ಲಂಚ ನೀಡಲು ನಿರ್ಧರಿಸಿದ್ದರು.
ಸರ್ಕಾರಿ ಅಭಿಯೋಜಕರ ಕಚೇರಿಯಲ್ಲಿಯೇ 5,000 ನಗದು ಹಣ ಕವರ್​ನಲ್ಲಿ ನೀಡಿ ಒತ್ತಾಯಪೂರ್ವಕವಾಗಿ ಲಂಚ ನೀಡಲು ಯತ್ನಿಸಿದ್ದರು. ಈ ವೇಳೆ ದಾಳಿ ಮಾಡಿದ ಲೋಕಾಯುಕ್ತ ಪೊಲೀಸ್​ ಇನ್ಸ್​ಪೆಕ್ಟರ್​ ರಾಜಶೇಖರ ಬಡದೇಸಾರ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಲಂಚದ ಕುರಿತು ಕಲಬುರಗಿ ವಿಭಾಗದ ಹಿರಿಯ ಕಾನೂನು ಅಧಿಕಾರಿ ಪ್ರಾಣೇಶ ಭರತನೂರ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಲಂಚದ ಹಣ ನೀಡುವ ವೇಳೆ ಆರೋಪಿಗಳನ್ನು ಬಂಧಿಸಲಾಗಿದೆ. ಇನ್ಸ್​ಪೆಕ್ಟರ್​ ಅರುಣ್​ ಕುಮಾರ, ರವಿ ಪವಾರ್​, ಇತರೆ ಸಿಬ್ಬಂದಿ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net