ಕಲಬುರಗಿ: ನಗರದ ಕೋರಂಟಿ ಹನುಮಾನ ಮಂದಿರದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಸ್ಟೇಷನ್ ಬಜಾರ್ ಪೊಲೀಸರು ವಶಕ್ಕೆ ಪಡೆದು, ಆತನಿಂದ ೫೬ ಗ್ರಾಂ. ಗಾಂಜಾ ವಶಕ್ಕೆ ಪಡೆಯಲಾಗಿದೆ. ತಾರೈಲ್ ಇರಾನಿ ಗಲ್ಲಿಯ ಸಾದಿಕ್ ಹುಸೇನ್(೩೬) ಬಂಧಿತ ಆರೋಪಿ. ಕೋರಂಟಿ ಹನುಮಾನ್ ಗುಡಿ ರಸ್ತೆಯ ನೀರಿನ ಟ್ಯಾಂಕ್ ಕೆಳಗಿನ ಖುಲ್ಲಾ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಪೊಲೀಸರಿಗೆ ದೊರೆತ್ತಿತ್ತು. ಪಿಎಸ್ಐ ಇಂದಿರವ್ವ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ, ೨೫೦೦ ರೂ. ಮೌಲ್ಯದ ೫೬ ಗ್ರಾಂ ಗಾಂಜಾ ಹಾಗೂ ಸ್ಕೂಟರ್, ಮೊಬೈಲ್, ೧೦೦ ನಗದು ಜಪ್ತಿ ಮಾಡಿಕೊಳ್ಳಲಾಗಿದೆ. ವಿಚಾರಣೆ ನಡೆಸಿದಾಗ ಬೀದರ್ ನಗರದ ಇರಾನಿ ಗಲ್ಲಿಯ ಅಪರಿಚಿತ ವ್ಯಕ್ತಿಯಿಂದ ೫೦ ಗ್ರಾಂ ಗಾಂಜಾವನ್ನು ಖರೀದಿಸಿ, ಇಲ್ಲಿ ಸರ‍್ವಜನಿಕರಿಗೆ ಮಾರಾಟ ಮಾಡುತ್ತಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.