

ಆದಿಚುಂಚನಗಿರಿ ಶ್ರೀ ಸಾನ್ನಿಧ್ಯ
ಹಿರೀಸಾವೆ: ಹೋಬಳಿಯ ಪುರಾಣ ಪ್ರಸಿದ್ಧ ಕಬ್ಬಳಿಯಲ್ಲಿ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಧರ್ಮ ದ್ವಜಾರೋಹಣ ನೆರವೇರಿಸುವ ಮೂಲಕ ಬಸವೇಶ್ವರಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಶನಿವಾರ ಚಾಲನೆ ನೀಡಿದರು.ಮಂಗಳವಾದ್ಯದೊಂದಿಗೆ ರಾಜಬೀದಿಯಲ್ಲಿ ಅಡ್ಡಪಲ್ಲಕ್ಕಿ ಮೆರವಣಿಗೆ ನಡೆಸಿ, ವಿಘ್ನೇಶ್ವರ ಹಾಗೂ ಗೋಪೂಜೆ ನಂತರ ಬಸವೇಶ್ವರಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂದಿ ವಿಗ್ರಹಕ್ಕೆ ಕ್ಷೀರಾಭಿಷೇಕ ನೆರವೇರಿಸಲಾಯಿತು.
ದೇಗುಲದ ಆವರಣದಲ್ಲಿರುವ ಪುಷ್ಕರಿಣಿಯಲ್ಲಿ ಗಂಗಾ ಪೂಜೆ ನೆರವೇರಿಸಿದ ಚುಂಚಶ್ರೀಗಳು
ಗರುಡಗಂಬದ ಮೇಲಿರುವ ದೀಪವನ್ನು ಬೆಳಗಿಸಿ ಧರ್ಮ ಧ್ವಜಾರೋಹಣ ಕಾರ್ಯ ನೆರವೇರಿಸಿದರು. ಭಕ್ತರಿಗೆ ಸಿಹಿ ಹಾಗೂ ಪ್ರಸಾದ ನೀಡಿದರು.
ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ಕಬ್ಬಳಿ ಶಾಖಾ ಮಠದ
ಶ್ರೀ ಶಿವಪುತ್ರನಾಥ ಸ್ವಾಮೀಜಿ, ಗುಡಿಗೌಡ ಪ್ರಕಾಶ್, ಗ್ರಾಮದ ಮುಖಂಡರು ಹಾಗೂ ಕಬ್ಬಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಂದ ಭಕ್ತರು ಪಾಲ್ಗೊಂಡಿದ್ದರು.