

ಬೆಂಗಳೂರು: ಅಪರಾಧ ವರದಿಗಾರಿಕೆಯಲ್ಲಿ ಹೆಸರು ಮಾಡಿದ್ದ ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ (43) ಇಂದು ಹೃದಯಾಘಾತಕ್ಕೀಡಾಗಿ ನಿಧನರಾದರು. ಚಿಕ್ಕಮಗಳೂರು ಜಿಲ್ಲೆ ಹೆಗ್ಗರವಳ್ಳಿಯ ಇವರು ಬೆಂಗಳೂರಿನಲ್ಲಿ 'ಹಾಯ್ ಬೆಂಗಳೂರ್' ವಾರಪತ್ರಿಕೆಯ ವರದಿಗಾರನಾಗಿ ಅಪರಾಧ ಹಾಗೂ ತನಿಖಾ ವರದಿಗಾರಿಕೆಯಲ್ಲಿ ಗುರುತಿಸಿಕೊಂಡಿದ್ದರು.
ಕೆಲವು ವರ್ಷಗಳ ಹಿಂದೆ 'ಹಾಯ್ ಬೆಂಗಳೂರ್' ಪತ್ರಿಕೆಯನ್ನು ತೊರೆದಿದ್ದ ಇವರು ತಮ್ಮದೇ ಆದ ಒಂದು ಪತ್ರಿಕೆಯನ್ನು ರೂಪಿಸಿ ಪ್ರಕಟಿಸುತ್ತಿದ್ದರು. ಇತ್ತೀಚೆಗೆ ತಮ್ಮ ಹುಟ್ಟೂರಾದ ಹೆಗ್ಗರವಳ್ಳಿಯಲ್ಲಿ ಮನೆಯೊಂದನ್ನು ನಿರ್ಮಿಸಿ ನೆಲೆಸಿದ್ದರು.
ಇಂದು ಮಧ್ಯಾಹ್ನ ಸುನೀಲ್ ಹೆಗ್ಗರವಳ್ಳಿಗೆ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಗೋಣಿಬೀಡುವಿನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಮಾರ್ಗಮಧ್ಯೆಯೇ ಕೊನೆಯುಸಿರೆಳೆದರು ಎಂಬುದಾಗಿ ಆಪ್ತವರ್ಗದವರು ತಿಳಿಸಿದ್ದಾರೆ. ಇವರ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಸಂತಾಪ ವ್ಯಕ್ತಪಡಿಸಿದೆ.