ಸಾವಿರ ವರ್ಷಗಳ ಹಿಂದಿನ ಬೆಳವಣಿಗೆಯನ್ನು ನೆನಪಿಸಿದೆ ಬಿಎಸ್​ವೈ ರಾಜೀನಾಮೆ: ಸತೀಶ್​ ಜಾರಕಿಹೊಳಿ

Untitled-1
Published on

ಬೆಳಗಾವಿ: ಮುಖ್ಯಮಂತ್ರಿ ಆಗಿದ್ದ ಬಿ.ಎಸ್​. ಯಡಿಯೂರಪ್ಪ ಅವರು ರಾಜೀನಾಮೆ ನೀಡಿದ ಬೆನ್ನಿಗೇ ಅದಕ್ಕೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ, ಸಾವಿರ ವರ್ಷಗಳ ಹಿಂದಿನ ಬೆಳವಣಿಗೆಯೊಂದನ್ನು ನೆನಪಿಸಿಕೊಂಡಿದ್ದಾರೆ. ಮಾತ್ರವಲ್ಲ ರಾಜೀನಾಮೆ ಹಿಂದೆ ಪಿತೂರಿ ಇದೆ ಎಂಬುದನ್ನೂ ಹೇಳಿಕೊಂಡಿದ್ದಾರೆ.

ಯಡಿಯೂರಪ್ಪ ಅವರು ರಾಜೀನಾಮೆ ನೀಡಿರುವ ಕುರಿತಾಗಿ ಗೋಕಾಕ್​ನಲ್ಲಿ ಮಾತನಾಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಇದು ಬಿಜೆಪಿಯ ಆಂತರಿಕ ವಿಚಾರ. ಆದರೆ ಅಧಿಕಾರದಿಂದ ಕೆಳಗೆ ಇಳಿಸಿರುವ ರೀತಿ ಸರಿಯಲ್ಲ. ಅದಕ್ಕಾಗಿ ಪಕ್ಷದಿಂದ ಯಡಿಯೂರಪ್ಪ ಮೇಲೆ ಒತ್ತಡ ಹಾಕಲಾಗಿದೆ. ಒತ್ತಡ ತಂತ್ರದಿಂದ ರಾಜೀನಾಮೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅದು ಕೆಟ್ಟ ಬೆಳವಣಿಗೆ ಅನಿಸುತ್ತಿದೆ ಎಂದು ಹೇಳಿದ್ದಾರೆ.

ಅತ್ಯಂತ ಪ್ರಭಾವಿ ನಾಯಕರಾಗಿರುವ ಯಡಿಯೂರಪ್ಪ ಅವರು ಇಂದು ಭಾವುಕರಾಗಿ ಭಾಷಣ ಮಾಡಿದ್ದಾರೆ. ಅವರನ್ನು ಗೌರವಯುತವಾಗಿ ಹೋಗಲು ಅವಕಾಶ ಮಾಡಿಕೊಡಬೇಕಿತ್ತು. ಒತ್ತಡದಿಂದ ಕೆಳಗೆ ಇಳಿಸಿದ್ದನ್ನು ಯಾರೂ ಸಹಿಸಲು ಸಾಧ್ಯವಿಲ್ಲ. ನನಗೆ ಇದು 12ನೇ ಶತಮಾನವನ್ನು ನೆನಪಿಸುತ್ತಿದೆ. ಮನುವಾದಿಗಳು ಬಸವಣ್ಣನನ್ನು ಅಧಿಕಾರದಿಂದ ಕೆಳಗೆ ಇಳಿಸಿದ್ದರು. ಬಸವಣ್ಣ ಸಹ ಮಂತ್ರಿಯಾಗಿ ಇದ್ದರು. ಸಾವಿರ ವರ್ಷಗಳ ಹಿಂದೆ ನಡೆದಿದ್ದಂಥದ್ದೇ ಇಂದು ಯಡಿಯೂರಪ್ಪ ವಿಚಾರದಲ್ಲಿ ಮರುಕಳಿಸಿದೆ. ಬಸವಣ್ಣ ವಿರುದ್ಧ ನಡೆದಿದ್ದ ಪಿತೂರಿ ಯಡಿಯೂರಪ್ಪ ವಿರುದ್ಧವೂ ನಡೆದಿದೆ ಎಂದ ಜಾರಕಿಹೊಳಿ, ಮನುವಾದಿಗಳ ವಿರುದ್ಧ ಯಡಿಯೂರಪ್ಪ ಹೋರಾಟ ಮಾಡಬೇಕು ಎಂದಿದ್ದಾರೆ.

ಇನ್ನು ರಾಜೀನಾಮೆಯಿಂದ ಕಾಂಗ್ರೆಸ್​ ಮೇಲಾಗುವ ಪರಿಣಾಮಗಳ ಕುರಿತು ಪ್ರತಿಕ್ರಿಯಿಸಿರುವ ಅವರು, ಕಾಂಗ್ರೆಸ್ ಪಕ್ಷಕ್ಕೆ ಲಾಭ-ನಷ್ಟ ಈಗಲೇ ಹೇಳುವುದಕ್ಕೆ ಆಗುವುದಿಲ್ಲ. ಆದರೆ ಯಡಿಯೂರಪ್ಪ ಅವರನ್ನು ಇಷ್ಟು ಅವಮಾನಗೊಳಿಸಬಾರದಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net