

ತಿರುವನಂತಪುರಂ: ಈ ಬಾರಿಯ ಕೇರಳದ ಓಣಂ ಬಂಪರ್ ( Onam bumper ) ಲಾಟರಿಯ 25 ಕೋಟಿ ರೂ. ಬಹುಮಾನ ಕರ್ನಾಟಕ ಮೂಲದ ವ್ಯಕ್ತಿಯ ಪಾಲಾಗಿದೆ. ಮಂಡ್ಯದ ಪಾಂಡವಪುರ ನಿವಾಸಿ ಹಾಗೂ ಸ್ಕೂಟರ್ ಮೆಕ್ಯಾನಿಕ್ ಆಗಿರುವ ಅಲ್ತಾಫ್ ಬಂಪರ್ ಬಹುಮಾನ ಗೆದ್ದಿದ್ದಾರೆ. ಆದರೆ, ಇಲ್ಲಿ ನಿಜವಾದ ಕೋಟ್ಯಧಿಪತಿ ಯಾರೆಂದರೆ ಅದು ಕೇರಳ ಸರ್ಕಾರ. ಏಕೆಂದರೆ, ಈ ಬಾರಿ 100 ಕೋಟಿಗೂ ಅಧಿಕ ಆದಾಯ ಸರ್ಕಾರಕ್ಕೆ ಹರಿದುಬಂದಿದೆ.
ಪ್ರತಿ ವರ್ಷ ಓಣಂ (Onam) ಹಬ್ಬದ ಸಂದರ್ಭದಲ್ಲಿ ಕೇರಳದಲ್ಲಿ ನಡೆಯುವ ರಾಜ್ಯ ಲಾಟರಿಯ ಲಕ್ಕಿ ಡ್ರಾ ರಿಸಲ್ಟ್ (Lucky Draw Result) ಅಕ್ಟೋಬರ್ 09ರಂದು ಪ್ರಕಟವಾಯಿತು. ಮಂಡ್ಯ ಮೂಲದ ಅಲ್ತಾಫ್ 25 ಕೋಟಿ ರೂ. ಬಹುಮಾನ ಗೆದ್ದಿದ್ದಾರೆ.
ಅಲ್ತಾಫ್ ಅವರು ಕೆಲ ದಿನಗಳ ಹಿಂದೆ ಕೆಲಸದ ನಿಮಿತ್ತ ಕೇರಳಕ್ಕೆ ತೆರಳಿದ್ದ ಅಲ್ತಾಫ್ 500 ರೂ ಕೊಟ್ಟು ಲಾಟರಿ ಟಿಕೆಟ್ ಖರೀದಿ ಮಾಡಿದ್ದರು. ಇದೀಗ ಅಲ್ತಾಫ್ ಖರೀದಿ ಮಾಡಿದ್ದ ಲಾಟರಿ ಟಿಕೆಟ್ಗೆ ಬಂಪರ್ ಬಹುಮಾನ ಬಂದಿದ್ದು, ತೆರಿಗೆ (Tax) ಕಳೆದು ಅಲ್ತಾಫ್ಗೆ 17.5 ಕೋಟಿ ರೂ. ಮೊತ್ತ ಸಿಕ್ಕಿದೆ. 2ನೇ ಬಹುಮಾನ ಪಡೆಯುವ 20 ಮಂದಿಗೆ ತಲಾ 1 ಕೋಟಿ ರೂಪಾಯಿ ಹಾಗೂ 3ನೇ ಬಹುಮಾನ ಗೆಲ್ಲುವ 20 ಮಂದಿಗೆ ತಲಾ 50 ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ.
ಮೂರನೇ ಬಹುಮಾನಗಳು ಘೋಷಣೆಯಾದ ಬಳಿಕ 20 ಮಂದಿಗೆ ಸಮಾಧಾನಕರ ಬಹುಮಾನವಾಗಿ ತಲಾ 5 ಲಕ್ಷ ರೂ.ಗಳನ್ನು ನೀಡಲಾಗುತ್ತದೆ. ಇನ್ನು 4ನೇ ಶ್ರೇಣಿಯ ಬಹುಮಾನಗಳಡಿ 5 ಲಕ್ಷ, 5ನೇ ಶ್ರೇಣಿಯಲ್ಲಿ 2 ಲಕ್ಷ ರೂ., 6ನೇ ಶ್ರೇಣಿಯ ಬಹುಮಾನದಡಿ 5 ಸಾವಿರ ರೂ., 7ನೇ ಶ್ರೇಣಿಯಡಿ 1,000 ರೂ., 8ನೇ ಶ್ರೇಣಿಯಡಿ 1 ಸಾವಿರ ರೂ., 9ನೇ ಶ್ರೇಣಿಯಡಿ 500 ರೂ.ಗಳನ್ನು ನೀಡಲಾಗುತ್ತದೆ. ಈ ಎಲ್ಲಾ ಬಹುಮಾನಗಳ ಒಟ್ಟು ಮೊತ್ತ 125.54 ಕೋಟಿ ರೂ. ಆಗಲಿದೆ.
ಒಂದು ಬಂಪರ್ ಲಾಟರಿ ಟಿಕೆಟ್ನ ಬೆಲೆ 500 ರೂ. ಆಗಿತ್ತು. ಒಟ್ಟು 71.43 ಲಕ್ಷ ಟಿಕೆಟ್ಗಳು ಮಾರಾಟವಾಗಿದ್ದು, ಇದರಿಂದ 357.15 ಕೋಟಿ ರೂ. ಆದಾಯ ಬಂದಿದೆ. ಇದರಲ್ಲಿ ಬಹುಮಾನದ ಹಣ, 28% ಜಿಎಸ್ಟಿ, ಮುದ್ರಣ ಮತ್ತು ವಿತರಣೆ ಸೇರಿದಂತೆ ಇತರ ವೆಚ್ಚಗಳನ್ನು ಹೊರತುಪಡಿಸಿದರೆ, ಸರ್ಕಾರಕ್ಕೆ ಕೋಟ್ಯಂತರ ರೂ. ಆದಾಯ ಸಿಗಲಿದೆ. ಬಹುಮಾನ ವಿತರಣೆಗೆ 125.54 ಕೋಟಿ ರೂ. ಖರ್ಚಾಗಲಿದೆ. ಎಲ್ಲ ಕಳೆದ ಸರ್ಕಾರಕ್ಕೆ 100 ಕೋಟಿ ರೂ.ಗೂ ಅಧಿಕ ಆದಾಯ ಬರಲಿದೆ. ಇಲ್ಲಿ ನಿಜವಾದ ಕೋಟ್ಯಧಿಪತಿ ಎಂದರೆ ಸರ್ಕಾರವೆಂದು ಹೇಳಬಹುದು. (ಏಜೆನ್ಸೀಸ್)