

ಬೆಂಗಳೂರು: ನಗರದಲ್ಲಿ ಏರೇಟರ್ ಅಳವಡಿಕೆ ಕಡ್ಡಾಯಗೊಳಿಸಿದ ಬಳಿಕ, ಈವರೆಗೆ 5 ಲಕ್ಷ ನಲ್ಲಿಗಳಿಗೆ ಏರೇಟರ್ ಅಳವಡಿಸಲಾಗಿದೆ. ಈ ಸಾಧನ ಅಳವಡಿಕೆಯಿಂದ ಶೇ.30ರಷ್ಟು ನೀರಿನ ಉಳಿತಾಯ ಮಾಡಬಹುದು ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಮಾಹಿತಿ ನೀಡಿದ್ದಾರೆ.
ಜಲಮಂಡಳಿಯ ಉತ್ತರ ವಲಯದ ವತಿಯಿಂದ ನಗರದ ಮಲ್ಲೆಶ್ವರಂನ ರಜತ ಭವನದಲ್ಲಿ ಶನಿವಾರ ಜಲಮಿತ್ರರಿಗಾಗಿ ಆಯೋಜಿಸಲಾಗಿದ್ದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ಕಾವೇರಿ ನೀರನ್ನು ಅನ್ಯ ಉದ್ದೇಶಕ್ಕೆ ಬಳಸಿದ 450 ಜನರ ಮೇಲೆ ಈವರೆಗೆ ದಂಡ ವಿಧಿಸಲಾಗಿದೆ ಎಂದರು.
ಸ್ವಯಂ ಪ್ರೇರಿತರಾಗಿ ಜಲಮಿತ್ರರಾಗಲು ಕಳೆದ 30 ದಿನಗಳಲ್ಲಿ ಸುಮಾರು 9 ಸಾವಿರ ಜನರು ಮುಂದಾಗಿದ್ದಾರೆ. ನೀರಿನ ಉಳಿತಾಯ ಹಾಗೂ ಸದ್ಬಳಕೆಗೆ ಕೈಜೊಡಿಸಿರುವ ನಾಗರೀಕರನ್ನು ಅಭಿವೃದ್ದಿಯ ಕಾರ್ಯದಲ್ಲಿ ಬಳಸಿಕೊಳ್ಳಲಾಗುವುದು. ದೂರದ ಕಾವೇರಿಯಿಂದ ನಗರಕ್ಕೆ ಸರಬರಾಜಾಗುವ ನೀರಿನ ಸದ್ಬಳಕೆ ಮುಖ್ಯ. ಪೋಲಾಗುವ ಪ್ರತಿ 1,000 ಲೀ. ನೀರಿನಿಂದ ಜಲಮಂಡಳಿಗೆ ಸುಮಾರು 50 ರೂ. ನಷ್ಟವಾಗುತ್ತದೆ. ಇದಲ್ಲದೇ ಪೋಲಾಗುವ ನೀರನ್ನು ಮತ್ತೆ ಸಂಸ್ಕರಣೆ ಮಾಡುಲು ರ್ಖಚಾಗುತ್ತಿದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ನಗರದಲ್ಲಿ ನೀರು ಉಳಿತಾಯ, ಸಂಸ್ಕರಿಸಿದ ನೀರಿನ ಬಳಕೆ, ಗ್ರೀನ್ ಸ್ಟಾರ್ ಚಾಲೆಂಜ್ ಪ್ರಾರಂಭಿಸಲಾಗಿದೆ. ಈ ಬಗ್ಗೆ ಜಲಮಿತ್ರರು ಜಾಗೃತಿ ಮೂಡಿಸಬೇಕಿದೆ.
ಜನಜಾಗೃತಿಯ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಭಾಗವಹಿಸುವ ಜಲಮಿತ್ರರಿಗೆ ಜಲಮಂಡಳಿ ವತಿಯಿಂದ ಅಭಿನಂದನೆ ಪ್ರಮಾಣ ಪತ್ರ ನೀಡಲಾಗುವುದು ಎಂದು ಹೇಳಿದರು.