ಸಂಸ್ಕರಿಸಿದ ನೀರಿನ ಬಳಕೆ ಶೇ.65ರಷ್ಟು ಹೆಚ್ಚಳ; ಟ್ಯಾಂಕರ್​ ಮೂಲಕ ಸರಬರಾಜು

Treated Water
Published on

ಬೆಂಗಳೂರು: ವಿವಿಧ ಉದ್ದೇಶಗಳಿಗೆ ಸಂಸ್ಕರಿಸಿದ ನೀರು ಬಳಸುವ ಬಗ್ಗೆ ಜನರಲ್ಲಿ ಅರಿವು ಹೆಚ್ಚುತ್ತಿದೆ. ಅದರಲ್ಲೂ ಕೈಗಾರಿಕೆಗಳು ಹಾಗೂ ಕಟ್ಟಡ ನಿರ್ಮಾಣಕ್ಕಾಗಿ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತಿದೆ. ಪರಿಣಾಮ ಕಳೆದ ಮಾರ್ಚ್​ನಿಂದ ಬೆಂಗಳೂರು ಜಲಮಂಡಳಿ ನಿತ್ಯ 65 ಲಕ್ಷ ಲೀ. ಸಂಸ್ಕರಿಸಿದ ನೀರು ಸರಬರಾಜು ಮಾಡುತ್ತಿದೆ.

ಮಳೆ ಕೊರತೆ ಹಾಗೂ ಅಂತರ್ಜಲ ಮಟ್ಟ ಕುಸಿತದ ಪರಿಣಾಮ ವರ್ಷಾರಂಭದಿಂದ ನೀರಿನ ಕೊರತೆ ಎದುರಾಗಿತ್ತು. ಅದರಲ್ಲೂ ೆಬ್ರವರಿ ಅಂತ್ಯದಿಂದ ಕುಡಿಯುವ ನೀರಿಗೆ ಪರಿದಾಟ ಅನುಭವಿಸಬೇಕಾದ ಪರಿಸ್ಥಿತಿ ತಲೆದೋರಿತ್ತು. ಈ ಸಂದರ್ಭ ಕಾವೇರಿ ನೀರು ಸರಬರಾಜು ಮೇಲಿನ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಅಗತ್ಯ ಬಳಕೆಯ ಹೊರತಾಗಿ, ನಿರ್ವಹಣೆ ಕೆಲಸಕ್ಕೆ ಸಂಸ್ಕರಿಸಿದ ನೀರು ಪೂರೈಸಲು ಜಲಮಂಡಳಿ ಮುಂದಾಗಿತ್ತು. ಇದರ ಭಾಗವಾಗಿ ನಗರದಲ್ಲಿ ಮರುಬಳಕೆಯ ನೀರನ್ನು ಬಳಸುವವರ ಸಂಖ್ಯೆ ಹೆಚ್ಚುತ್ತಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬಿಇಎಲ್​, ರೈಲ್ವೆ ವೀಲ್​ ಆ್ಯಕ್ಸೆಲ್​ ಟಕ, ಐಟಿಸಿ ಮುಂತಾದ ಉದ್ಯಮಗಳು ಹೆಚ್ಚಿನ ಪ್ರಮಾಣದಲ್ಲಿ ತ್ಯಾಜ್ಯ ನೀರನ್ನು ಮರುಬಳಕೆ ಮಾಡಿಕೊಳ್ಳುತ್ತಿವೆ.

ಕೆ.ಸಿ ವ್ಯಾಲಿ, ಬೆಳ್ಳಂದೂರು, ಹೊರಮಾವು ಸೇರಿದಂತೆ ನಗರದಲ್ಲಿ 33 ಸಂಸ್ಕರಣಾ ಟಕಗಳಿಂದ ನಿತ್ಯ 1,212 ಎಂಎಲ್​ಡಿ ಸಾಮರ್ಥ್ಯದಷ್ಟು ತ್ಯಾಜ್ಯ ನೀರನ್ನು ಸಂಸ್ಕರಿಸಲಾಗುತ್ತಿದೆ. ಈ ನೀರನ್ನು ಬಳಸಿಕೊಂಡು ನಗರದಲ್ಲಿ ಉದ್ಯಾನವನಗಳನ್ನು ನಿರ್ವಹಣೆ ಮಾಡಲಾಗುತ್ತಿದೆ. ಸದ್ಯ ಎದುರಾಗಿರುವ ಬರಗಾಲದ ಸಂದರ್ಭದಲ್ಲಿ ಕಟ್ಟಡ ಕಾಮಗಾರಿ ಹಾಗೂ ಕೈಗಾರಿಕೆಗಳಿಗೂ ಮರುಬಳಕೆಯ ನೀರನ್ನು ಬಳಸಲು ಕಡ್ಡಾಯಗೊಳಿಸಿ ಜಲಮಂಡಳಿ ಸೂಚನೆ ಹೊರಡಿಸಿದೆ.

ಟ್ಯಾಂಕರ್​ ಮೂಲಕ ಪೂರೈಕೆ

ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಟ್ಯಾಂಕರ್​ ಮೂಲಕ ಸಂಸ್ಕರಿಸಿದ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಗುತ್ತಿಗೆದಾರರು ಹೆಚ್ಚಿನ ಪ್ರಮಾಣದಲ್ಲಿ ನೀರು ತರಿಸಿಕೊಂಡು ಕಟ್ಟಡ ನಿರ್ಮಾಣಕ್ಕೆ ಬಳಸುತ್ತಿದ್ದಾರೆ. 600 ರೂ. ಗೆ 6 ಸಾವಿರ ಲೀ. ಸಾಮರ್ಥ್ಯದ ಟ್ಯಾಂಕರ್​ನಲ್ಲಿ ಸಂಸ್ಕರಿಸಿದ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೈಗಾರಿಕೆಗಳು ಹಾಗೂ ಬೇಡಿಕೆ ಹೆಚ್ಚಿರುವ ಪ್ರದೇಶಗಳಿಗೆ ಪೈಪ್​ಲೈನ್​ ಮೂಲಕ ನೀರು ಪೂರೈಸುವ ಬಗ್ಗೆ ಚಿಂತಿಸಲಾಗಿದೆ ಎಂದು ಜಲಮಂಡಳಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಿರ್ವಹಣೆ ಕೆಲಸಕ್ಕೆ ಸಂಸ್ಕರಿಸಿದ ನೀರು ಬಳಸುವುದರಿಂದ ಶುದ್ಧ ಕುಡಿಯುವ ನೀರಿನ ಮೇಲಿನ ಒತ್ತಡ ಶೇ.40ರಷ್ಟು ಕಡಿಮೆ ಮಾಡಬಹುದಾಗಿದೆ. ಸಂಸ್ಕರಿಸಿದ ನೀರು ಪೂರೈಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜಲಮಂಡಳಿ ವಿವಿಧ ಕ್ರಮಗಳನ್ನು ಅನುಸರಿಸುತ್ತಿದೆ. ಇದರ ಭಾಗವಾಗಿ ಬೆಂಗಳೂರು ಜಲಮಂಡಳಿಯ ವೆಬ್​ಸೈಟ್​ನಲ್ಲಿ ಅಗತ್ಯ ಮಾಹಿತಿ ನಮೂದಿಸಿ, ಪ್ರತಿನಿತ್ಯ ನೀರು ತರಿಸಿಕೊಳ್ಳಬಹುದು.

ಸಂಸ್ಕರಿಸಿದ ನೀರಿನ ಬಳಕೆಯಿಂದ ಕಾವೇರಿ ನೀರು ಪೂರೈಕೆ ಹಾಗೂ ಕೊಳವೆಬಾವಿ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ನಿತ್ಯ 62 ಲಕ್ಷ ಲೀ. ನೀರು ಪೂರೈಸುತ್ತಿದ್ದೇವೆ. ಸದ್ಯದಲ್ಲೇ 1 ಕೋಟಿ ಲೀ. ನೀರು ಸರಬರಾಜು ಮಾಡುವ ಗುರಿ ಹೊಂದಿದ್ದೇವೆ.
-ಡಾ.ವಿ.ರಾಮ್​ ಪ್ರಸಾತ್​ ಮನೋಹರ್​, ಜಲಮಂಡಳಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net