ಹಕ್ಕುಪತ್ರ ಸಿಕ್ಕಿದರೂ ನಿವೇಶನ ಸಿಕ್ಕಿಲ್ಲ : ಮುಂಡೂರು ಗ್ರಾಪಂ ವ್ಯಾಪ್ತಿಯ ಫಲಾನುಭವಿಗಳ ಅಳಲು

3-grama
Published on

ಪುತ್ತೂರು ಗ್ರಾಮಾಂತರ: ನಾಲ್ಕು ವರ್ಷದ ಹಿಂದೆಯೇ ಇಂದಿರಾ ಗ್ರಾಮೀಣ ವಸತಿ ನಿವೇಶನ ಯೋಜನೆಯಡಿ ಹಕ್ಕುಪತ್ರ ನೀಡಲಾಗಿದೆ. ಆದರೆ ಈ ತನಕ ಗಡಿ ಗುರುತು ಮಾಡಿ ನಿವೇಶನ ಕೊಟ್ಟಿಲ್ಲ. ಇದಕ್ಕಾಗಿ ನಾವು ಕಳೆದ 4 ವರ್ಷಗಳಿಂದ ಅಲೆದಾಡುತ್ತಿದ್ದೇವೆ. ಆದರೆ ಗ್ರಾಪಂನವರು ವರ್ಷವಿಡೀ ಇಂದು, ನಾಳೆ ಎಂದು ಹೇಳುತ್ತಾ ದಿನ ದೂಡುತ್ತಲೇ ಇದ್ದಾರೆ... ಇದು ಮುಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮೀಣ ವಸತಿ ನಿವೇಶನ ಯೋಜನೆಯಡಿ ಹಕ್ಕುಪತ್ರ ಪಡೆದುಕೊಂಡಿರುವ ಫಲಾನುಭವಿಗಳ ಅಳಲು.

ಇಂದಿರಾ ಗ್ರಾಮೀಣ ವಸತಿ ನಿವೇಶನ ಯೋಜನೆಯಡಿ ಹಕ್ಕುಪತ್ರ ಪಡೆದುಕೊಂಡಿರುವ ಮುಂಡೂರು ಗ್ರಾಪಂ ವ್ಯಾಪ್ತಿಯ 24 ಮಂದಿಯ ಪೈಕಿ ಕೆಲವರು ಸೋಮವಾರ ಮುಂಡೂರು ಗ್ರಾಪಂ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಯನ್ನು ಭೇಟಿಯಾಗಿ ಈ ಕುರಿತು ಮನವಿ ಸಲ್ಲಿಸಿದರು.

ಇಂದಿರಾ ಗ್ರಾಮೀಣ ವಸತಿ ನಿವೇಶನ ಯೋಜನೆಯಡಿ 24 ಮಂದಿಗೆ ನಿವೇಶನ ಹಕ್ಕುಪತ್ರವನ್ನು 2020ರ ಜೂನ್16ರಂದು ನೀಡಲಾಗಿದೆ. ಆದರೆ ಇದುವರೆಗೆ ಜಾಗ ಗುರುತಿಸಿ ಕೊಟ್ಟಿಲ್ಲ. ಈ ಬಗ್ಗೆ ಸಂಬಂಧಪಟ್ಟವರಿಂದ ಸರಿಯಾದ ಉತ್ತರ ಕೂಡ ಸಿಕ್ಕಿಲ್ಲ. ಇನ್ನು ಒಂದು ತಿಂಗಳೊಳಗಾಗಿ ಹಕ್ಕುಪತ್ರದ ಜಾಗವನ್ನು ಗುರುತಿಸಿ ನೀಡದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಸಿದರು.

ನಂಬಿಕೆ ಕಳೆದುಕೊಂಡಿದ್ದೇವೆ...

ನಿವೇಶನ ನೀಡಲು ರಸ್ತೆ ವ್ಯವಸ್ಥೆ ಆಗಬೇಕು. ಚರಂಡಿ, ಮೋರಿ ವ್ಯವಸ್ಥೆ ಆಗಬೇಕು. ಆ ಮೇಲೆ ನಿವೇಶನ ಕೊಡುತ್ತೇವೆ ಎಂಬ ಭರವಸೆ ನೀಡುತ್ತಿದ್ದಾರೆಯೇ ಹೊರತು ಈ ತನಕ ಯಾವುದೇ ಕೆಲಸ ಮಾಡಿಲ್ಲ. ಇಂದಲ್ಲಾ ನಾಳೆ ಆಗುತ್ತದೆ ಎಂದು ನಾವು ನಂಬಿದ್ದೆವು. ಈ ಕುರಿತು ಶಾಸಕರಿಗೂ ತಿಳಿಸಿದ್ದೇವೆ. ಶಾಸಕರು ಸೌಲಭ್ಯಕ್ಕಾಗಿ 3 ಲಕ್ಷ ರೂ. ಅನುದಾನ ಇಟ್ಟಿದ್ದಾರೆ ಎಂಬ ಮಾಹಿತಿಯೂ ಇದೆ. ಆದರೆ ಪಂಚಾಯಿತಿಯವರು ಇಂದು, ನಾಳೆ ಎಂದು ಹೇಳುತ್ತಲೇ ಇದ್ದಾರೆ. ಮುಂದೆ ಒಂದು ತಿಂಗಳೊಳಗಾಗಿ ನಿವೇಶನ ಗುರುತಿಸಿಕೊಡದಿದ್ದರೆ ಉಗ್ರ ಪ್ರತಿಭಟನೆ ಮಾಡುವ ನಿರ್ಧಾರ ಕೈಗೊಂಡಿದ್ದೇವೆ ಎಂದು ಫಲಾನುಭವಿ ಅಮಿತಾ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net